ಲೋಕಬಂಧು ನ್ಯೂಸ್ | ಕಾರ್ಕಳ, ಏ.12
ಕಾರ್ಕಳ ಭಗವಾನ್ ಶ್ರೀ ಬಾಹುಬಲಿಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿ ಕಾರ್ಯಾಲಯದ ಉದ್ಘಾಟನೆ ಮತ್ತು ಮಹಾಮಸ್ತಕಾಭಿಷೇಕದ ದಿನಾಂಕ ಘೋಷಣೆ ಕಾರ್ಯಕ್ರಮ ಏ.19ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ಇಲ್ಲಿನ ದಾನಶಾಲೆ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆಯಲಿದೆ ಎಂದು ಮಹಾಮಸ್ತಕಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಹೇಳಿದರು.
ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕಾರ್ಕಳ ಶ್ರೀ ಜೈನ ಮಠದ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಪಾವನ ಸಾನಿಧ್ಯದಲ್ಲಿ, ಮಹಾಮಸ್ತಕಾಭಿಷೇಕ ಸಮಿತಿ ಅಧ್ಯಕ್ಷ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು 2027ರ ಮಹಾಮಸ್ತಕಾಭಿಷೇಕದ ದಿನಾಂಕ ಘೋಷಣೆ ಮಾಡುವರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಶೇಷಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಮಹಾಮಸ್ತಕಾಭಿಷೇಕ ಸಮಿತಿ ಕಾರ್ಯಾಲಯ ಉದ್ಘಾಟಿಸುವರು.
ಕರ್ನಾಟಕ ಸರಕಾರದ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖಾ ಸಚಿವ ಹಾಗೂ ಮಹಾಮಸ್ತಕಾಭಿಷೇಕ ಸಮಿತಿ ಗೌರವ ಸಂರಕ್ಷಕ ಡಿ.ಸುಧಾಕರ್ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಬೆಂಗಳೂರು ಅಧ್ಯಕ್ಷ ಹಾಗೂ ಮಹಾಮಸ್ತಕಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸುವರು. ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಹಾಗೂ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಅದಾನಿ ಗ್ರೂಫ್ ಕರ್ನಾಟಕ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಅಧ್ಯಕ್ಷ ಕಿಶೋರ್ ಅಳ್ವ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಮಾಜಿ ಸಚಿವ ಮತ್ತು ಮಹಾಮಸ್ತಕಾಭಿಷೇಕ ಸಮಿತಿ ಉಪಾಧ್ಯಕ್ಷ ಕೆ.ಅಭಯಚಂದ್ರ ಜೈನ್ ಹಾಗೂ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಉದಯ ಕುಮಾರ್ ಶೆಟ್ಟಿ ಮುನಿಯಾಲು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಡಾ.ರಾಜೇಂದ್ರಕುಮಾರ್ ವಿವರಿಸಿದರು.
ಕಾರ್ಕಳ ಶ್ರೀ ಜೈನ ಮಠದ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಪಾವನ ಸಾನಿಧ್ಯ, ತ್ಯಾಗಿಗಳು ಹಾಗೂ ನಾಡಿನ ಎಲ್ಲಾ ಯತಿಗಳ ಉಪಸ್ಥಿತಿಯಲ್ಲಿ ನಡೆಯುವ ಈ ಮಹಾಮಸ್ತಕಾಭಿಷೇಕ ಮಹೋತ್ಸವ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಹಾಗೂ ಡಾ.ಎಮ್.ಎನ್. ರಾಜೇಂದ್ರ ಕುಮಾರ್ ಕಾರ್ಯಾಧ್ಯಕ್ಷತೆಯಲ್ಲಿ ಸಂಯೋಜಿಸಲ್ಪಟ್ಟ ಮಹಾಮಸ್ತಕಾಭಿಷೇಕ ಸಮಿತಿ ಮಹೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ, ವೈಭವೋಪೇತವಾಗಿ ಮತ್ತು ಸುವ್ಯವಸ್ಥಿತವಾಗಿ ನೆರವೇರಿಸುವುದಕ್ಕಾಗಿ ಈಗಾಗಲೇ ಸಮಾಜದ ಸಮಸ್ತರ ಸಹಕಾರದೊಂದಿಗೆ ಕಾರ್ಯಪ್ರವೃತ್ತವಾಗಿದೆ.
ಈ ಮಹೋತ್ಸವದ ಸಂದರ್ಭದಲ್ಲಿ ದೇಶ- ವಿದೇಶಗಳಿಂದ ಲಕ್ಷಾಂತರ ಭಕ್ತರು ಹಾಗೂ ಪ್ರವಾಸಿಗರು ಕಾರ್ಕಳಕ್ಕೆ ಆಗಮಿಸಲಿದ್ದಾರೆ. ಆಗಮಿಸಲಿರುವ ಲಕ್ಷಾಂತರ ಯಾತ್ರಿಕರಿಗೆ ಕಾರ್ಕಳ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯ ಒದಗಿಸುವ ಬಗ್ಗೆ ಸರಕಾರದ ವಿವಿಧ ಇಲಾಖೆಗಳು ವ್ಯವಸ್ಥೆ ಮಾಡಬೇಕಾದ ಸೌಲಭ್ಯ, ಕಾಮಗಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆಯಬೇಕಾದ ಕಾರ್ಯಕ್ರಮಗಳ ಕ್ರಿಯಾ ಯೋಜನೆ ಸಿದ್ಧಪಡಿಸಿ ಒಟ್ಟು ರೂ. 82 ಕೋ. 37 ಲಕ್ಷ 52 ಸಾವಿರ ರೂ. ವೆಚ್ಚದ ಅಂದಾಜು ಪಟ್ಟಿಯ ಪ್ರಸ್ತಾವನೆಯನ್ನು ಈಗಾಗಲೇ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ.
2015ರ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಹೆಚ್ಚಿನ ಅನುದಾನವನ್ನು ಆಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ನೀಡಿದ್ದು, ಈ ಬಾರಿಯೂ ಅವರ ನೇತೃತ್ವದ ರಾಜ್ಯ ಸರಕಾರಕ್ಕೆ ಸಲ್ಲಿಸಲಾದ ಅಂದಾಜು ಪಟ್ಟಿಯ ಉಲ್ಲೇಖಿತ ಕ್ರಿಯಾ ಯೋಜನೆಗೆ ಸಂಪೂರ್ಣವಾಗಿ ಸ್ಪಂದಿಸುವ ಭರವಸೆ ಇದೆ ಎಂದರು.
ಈ ಉಲ್ಲೇಖಿತ ಕ್ರಿಯಾ ಯೋಜನೆಗೆ ಪೂರಕವಾಗಿ ಕರ್ನಾಟಕ ರಾಜ್ಯ ಸರಕಾರ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ 1.59 ಕೋ.ರೂ. ಮಂಜೂರು ಮಾಡಿ ಮೊದಲ ಕಂತಾಗಿ ಶೇ.75ರಷ್ಟು (1 ಕೋ 19 ಲಕ್ಷ 25 ಸಾವಿರ) ಬಿಡುಗಡೆ ಮಾಡಿದೆ. ಬಿಡುಗಡೆಯಾದ ಅನುದಾನದಲ್ಲಿ ಅಟ್ಟಳಿಗೆ ನಿರ್ಮಾಣಕ್ಕೆ ರೂ. 37.50 ಲಕ್ಷ, ಜೈನ ಮಠದ ಬಳಿಯ ತ್ಯಾಗಿ ಭವನ ಹಾಗೂ ಮಾತಾಜಿ ಭವನ ನವೀಕರಣಕ್ಕೆ 63.75 ಲಕ್ಷ, ಶ್ರೀಜೈನ ಮಠದ ಬಳಿಯ ಸಭಾಂಗಣ ನವೀಕರಣಕ್ಕೆ 8.25 ಲಕ್ಷ ಹಾಗೂ ಶ್ರೀ ಗೊಮ್ಮಟೇಶ್ವರ ಬೆಟ್ಟಕ್ಕೆ ನೀರಿನ ಸರಬರಾಜು ಹಾಗೂ ಕೊಳವೆ ಬಾವಿ ನಿರ್ಮಾಣಕ್ಕೆ 9.75 ಲಕ್ಷ ಬಿಡುಗಡೆಗೊಳಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಜೈನ್, ಕೋಶಾಧಿಕಾರಿ ಎ.ಮೋಹನ್ ಪಡಿವಾಳ್, ಪ್ರಭಾತ್ ಕುಮಾರ್, ಅನಂತರಾಜ ಪೂವಣಿ, ಸಂಪತ್ ಸಾಮ್ರಾಜ್ಯ, ಸುಧೀರ್ ಪಡಿವಾಳ್, ಕೆ ಜಯಕೀರ್ತಿ ಕಡಂಬ, ಹೇಮಚಂದ್ರ ಜೈನ್, ಸುನಿಲ್ ಕುಮಾರ್ ಬಜಗೋಳಿ, ಮಹಾವೀರ ಹೆಗ್ಡೆ, ಭರತ್ ಕುಮಾರ್ ಜೈನ್, ಶೀತಲ್ ಜೈನ್, ಸುಭಾಶ್ಚಂದ್ರ ಚೌಟ, ಶಾಂತಿರಾಜ ಜೈನ್, ಮಹೇಂದ್ರ ವರ್ಮ ಜೈನ್, ಶಿಶುಪಾಲ ಜೈನ್, ರಾಜೇಂದ್ರ ಮುದ್ಯ, ಎಂ.ಕೆ.ಸುವ್ರತ್ ಕುಮಾರ್, ಅರುಣ ರಾಜೇಂದ್ರ ಕುಮಾರ್, ಜಯವರ್ಮ ಹೆಗ್ಡೆ, ಶಶಿಕಲಾ ಹೆಗ್ಡೆ, ಹರ್ಷಿಣಿ ವಿಜಯರಾಜ್, ಮೋಹಿನಿ ವರ್ಧಮಾನ್ ಮೊದಲಾದವರಿದ್ದರು.
.jpg)
.jpg)