ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ: 18.13 ಕೋ.ರೂ ಲಾಭ

ಲೋಕಬಂಧು ನ್ಯೂಸ್ | ಉಡುಪಿ, ಏ.20
ಪ್ರತಿಷ್ಠಿತ ಸಹಕಾರ ಸಂಸ್ಥೆ ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ 2025-26ನೇ ಸಾಲಿನಲ್ಲಿ 4,062.29 ಕೋ. ರೂ. ವಾರ್ಷಿಕ ವಹಿವಾಟು ನಡೆಸಿ 18.13 ಕೋ. ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳೆದ 108 ವರ್ಷಗಳಿಂದ ಕಾರ್ಯನಿರ್ವಹಿಸುತ್ರಿರುವ ಸಂಘ, 2025- 26ನೇ ಆರ್ಥಿಕ ವರ್ಷಾಂತ್ಯಕ್ಕೆ 22,869 ಸದಸ್ಯರನ್ನು ಹೊಂದಿದ್ದು, ವರದಿ ವರ್ಷಾಂತ್ಯಕ್ಕೆ 658.8 ಕೋ. ರೂ. ಠೇವಣಿ ಸಂಗ್ರಹಿಸಿ, ಕಳೆದ ಸಾಲಿಗಿಂತ ಶೇ.14.93ರಷ್ಟು ಅಧಿಕ ಸಾಧಿಸಿದೆ.


ಸದಸ್ಯರಿಗೆ ಗೃಹ ನಿರ್ಮಾಣ, ವಾಹನ ಖರೀದಿ, ಜಮೀನು ಖರೀದಿ ಮತ್ತು ಅಭಿವೃದ್ಧಿ, ವಾಣಿಜ್ಯ ಸಂಕೀರ್ಣ ಹಾಗೂ ವಸತಿ ಸಮುಚ್ಚಯ ನಿರ್ಮಾಣ, ಸ್ವಉದ್ಯೋಗ, ವಿದ್ಯಾಭ್ಯಾಸ, ಮದುವೆ, ಚಿನ್ನಾಭರಣಗಳ ಈಡಿನ ಮೇಲೆ ಹಾಗೂ ಮನೆವಾರ್ತೆಗಳಿಗೆ ಅಗತ್ಯ ದಾಖಲೆಗಳನ್ನು ಪಡೆದು ಸಾಲ ವಿತರಿಸಲಾಗುತ್ತಿದೆ.


ವರದಿ ವರ್ಷಾಂತ್ಯಕ್ಕೆ ಸದಸ್ಯರ ಹೊರಬಾಕಿ ಸಾಲ 533.96 ಕೋ. ರೂ. ಇದ್ದು, ಇದು ಕಳೆದ ಸಾಲಿಗಿಂತ ಶೇ. 11.94ರಷ್ಟು ಏರಿಕೆಯಾಗಿದೆ. ಸಂಘ ರೂ. 117.6 ಕೋ. ನಿಧಿ ಹಾಗೂ 268.3 ಕೋ. ರೂ. ಹೂಡಿಕೆ ಹೊಂದಿದ್ದು, ಒಟ್ಟು 791.46 ಕೋ. ದುಡಿಯುವ ಬಂಡವಾಳ ಹೊಂದಿದೆ.


11 ಶಾಖೆಗಳ ಪೈಕಿ 8 ಸ್ವಂತ ನಿವೇಶನಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಂಘದ 12ನೇ ಶಾಖೆಗಾಗಿ ಕುಂದಾಪುರದ ಹೃದಯಭಾಗದಲ್ಲಿ ಸ್ವಂತ ಕಚೇರಿ ಖರೀದಿಸಲಾಗಿದ್ದು, ಅದರ ಕಾಮಗಾರಿ ಅಂತಿಮ ಹಂತದಲ್ಲಿದೆ. ಅಗತ್ಯ ಸೌಲಭ್ಯಗಳೊಂದಿಗೆ ಶೀಘ್ರದಲ್ಲೇ ಗ್ರಾಹಕರ ಸೇವೆಗೆ ಶಾಖೆ ಸಿದ್ಧವಾಗಲಿದೆ.


ಚೇತನಾ ಮೊಬೈಲ್ ಆ್ಯಪ್
ಡಿಜಿಟಲೀಕರಣದ ಭಾಗವಾಗಿ ಅಭಿವೃದ್ಧಿಪಡಿಸಿದ ಚೇತನಾ ಮೊಬೈಲ್ ಆ್ಯಪ್ ಮೂಲಕ ಗ್ರಾಹಕರು ತಮ್ಮ ಖಾತೆಗಳಿಗೆ ಸಂಬಂಧಿಸಿದಂತೆ ಹಣ ವರ್ಗಾವಣೆ, ಸಾಲ ಖಾತೆ ನಿರ್ವಹಣೆ ಹಾಗೂ ಸಂಘದ ನೂತನ ಯೋಜನೆಗಳ ಮಾಹಿತಿ ಪಡೆಯಬಹುದಾಗಿದ್ದು, ಈ ಆ್ಯಪ್'ಗೆ ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಗೂಗಲ್ ಪ್ಲೇಸ್ಟೋರ್ ಹಾಗೂ ಆ್ಯಪಲ್ ಆ್ಯಪ್ ಸ್ಟೋರ್'ನಲ್ಲಿ ಲಭ್ಯವಿದೆ.


ಸಂಘದ ಎಲ್ಲಾ ಶಾಖೆಗಳಲ್ಲಿ ಸೇಫ್ ಲಾಕರ್, ಇ-ಸ್ಟಾಂಪಿಂಗ್, ಪಾನ್ ಕಾರ್ಡ್ ಸೇವೆ, ಹಣ ವರ್ಗಾವಣೆ ಸೌಲಭ್ಯ, ಆರೋಗ್ಯ ಕಾರ್ಡ್, ವಿಮಾ ಸೇವೆಗಳು, ದೈನಿಕ ಠೇವಣಿ ಸಂಗ್ರಾಹಕರಿಗೆ ಮೊಬೈಲ್ ಮೂಲಕವೇ ಠೇವಣಿ ಸಂಗ್ರಹಣೆಗೆ ಅವಕಾಶ ಒದಗಿಸಿರುವುದು, '0' ಬ್ಯಾಲೆನ್ಸ್ ವಿದ್ಯಾನಿಧಿ ಖಾತೆ, ಮಿಸ್ಡ್ ಕಾಲ್ ಸೇವೆ ಹಾಗೂ ಉಚಿತ ಎಸ್ಎಂಎಸ್ ಸೌಲಭ್ಯ ಒದಗಿಸಲಾಗುತ್ತಿದೆ.


ಸಹಕಾರ ಮಾಣಿಕ್ಯ ಪ್ರಶಸ್ತಿ
72ನೇ ಅಖಿಲ ಭಾರತ ಸಹಕಾರ ಸಪ್ತಾಹ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಸಂಘಕ್ಕೆ 'ಸಹಕಾರ ಮಾಣಿಕ್ಯ' ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯೊಂದಿಗೆ ನಗದು ಬಹುಮಾನ ಹಾಗೂ 5 ಗ್ರಾಂ. ಚಿನ್ನದ ಪದಕ ಪಡೆದಿದೆ. ಸಹಕಾರ ಕ್ಷೇತ್ರದಲ್ಲಿ ಸಂಘದ ಉತ್ತಮ ಸೇವೆ, ನಿರ್ವಹಣೆ ಹಾಗೂ ಸಾಧನೆಯನ್ನು ಪರಿಗಣಿಸಿ ಈ ಗೌರವ ದೊರೆತಿದ್ದು, ಉಡುಪಿ ಜಿಲ್ಲೆಯ ಮೊದಲ ಕ್ರೆಡಿಟ್ ಸಹಕಾರ ಸಂಘವಾಗಿ ಈ ಪ್ರಶಸ್ತಿ ಪಡೆದಿದೆ.


ಸಂಘ 2 ಬಾರಿ ರಾಷ್ಟ್ರ ಪ್ರಶಸ್ತಿ, 9 ಬಾರಿ ರಾಜ್ಯ ಮಟ್ಟದ ಪ್ರಶಸ್ತಿ ಹಾಗೂ 19 ಬಾರಿ ಅವಿಭಜಿತ ದ.ಕ ಜಿಲ್ಲಾ ಪ್ರಶಸ್ತಿ ಪಡೆದು ಯಶಸ್ವಿ ಕ್ರೆಡಿಟ್ ಸಹಕಾರ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ವ್ಯವಹಾರ ಲಾಭದೊಂದಿಗೆ ಸಾಮಾಜಿಕ ಹೊಣೆಗಾರಿಕೆಯನ್ನೂ ನಿಭಾಯಿಸುತ್ತಿರುವ ಸಂಘ ಪ್ರತಿವರ್ಷ ಸುಮಾರು 25 ಲಕ್ಷ ರೂ.ಗಳನ್ನು ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಮೀಸಲಿಡುತ್ತಿದೆ ಎಂದರು.


ಮುಂದಿನ ಗುರಿ
ಮುಂದಿನ ವರ್ಷದಲ್ಲಿ 750 ಕೋ. ಠೇವಣಿ ಹಾಗೂ 650 ಕೋ. ಸಾಲ ಸೇರಿದಂತೆ ಒಟ್ಟು 1,400 ಕೋ. ರೂ. ವ್ಯವಹಾರ ನಡೆಸುವ ಗುರಿಯನ್ನು ಸಂಸ್ಥೆ ಹೊಂದಿದೆ. ಉಡುಪಿ ನಗರದ ಹೃದಯಭಾಗದಲ್ಲಿ ಈಗಾಗಲೇ ಖರೀದಿಸಿರುವ 1 ಎಕರೆ ಜಾಗದಲ್ಲಿ ಅಂದಾಜು 10 ಕೋ. ರೂ. ವೆಚ್ಚದಲ್ಲಿ `ಸಹಕಾರ ಸೌಧ' ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ರತಿಯೊಂದು ಶಾಖೆಯಲ್ಲೂ ಶಾಖಾ ಸಲಹಾ ಸಮಿತಿ ರಚಿಸಲಾಗಿದ್ದು, ಅವುಗಳ ಮೇಲ್ವಿಚಾರಣೆಯಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ ಎಂದು ಜಯಕರ ಶೆಟ್ಟಿ ತಿಳಿಸಿದರು.


ಉಪಾಧ್ಯಕ್ಷರಾದ ಜಾರ್ಜ್ ಸಾಮ್ಯುಯೆಲ್, ಆಡಳಿತ ಮಂಡಳಿ ಸದಸ್ಯರಾದ ಸಂಜೀವ ಕಾಂಚನ್, ಪುರುಷೋತ್ತಮ ಪಿ. ಶೆಟ್ಟಿ, ಉಮಾನಾಥ ಎಲ್., ವಿನಯ ಕುಮಾರ್ ಟಿ.ಎ, ಪದ್ಮನಾಭ ನಾಯಕ್, ಸೈಯದ್ ಅಬ್ದುಲ್ ರಜಾಕ್, ಸದಾಶಿವ ನಾಯ್ಕ್, ಮನೋಹರ ಎಸ್. ಶೆಟ್ಟಿ, ಸಾಧು ಸಾಲ್ಯಾನ್, ಜಯಾ ಶೆಟ್ಟಿ ಮತ್ತು ಗಾಯತ್ರಿ ಎಸ್. ಭಟ್, ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿದ್ದರು.