ಪರಿಶ್ರಮದ ಬದುಕಿಗೆ ಭಗೀರಥನ ತಪಸ್ಸು ಮಾದರಿ

ಲೋಕಬಂಧು ನ್ಯೂಸ್ | ಉಡುಪಿ, ಏ.24
ರಾಜನಾಗಿ, ಋಷಿಯಾಗಿ ಭಗೀರಥ ಸಮಾಜಕ್ಕೆ ದೊಡ್ಡ ಸಂದೇಶ ನೀಡಿದ್ದು, ಪ್ರಯತ್ನ ಹಾಗೂ ಪರಿಶ್ರಮದ ಮೂಲಕ ಗಂಗೆಯನ್ನೇ ಧರೆಗೆ ತಂದ ಭಗೀರಥನ ತಪಸ್ಸು ಹಾಗೂ ಪರಿಶ್ರಮದ ಮನೋಭಾವವನ್ನು ನಮ್ಮ ದುಡಿಮೆ ಮತ್ತು ದಿನನಿತ್ಯದ ಬದುಕಿನಲ್ಲಿ ಆಳವಡಿಸಿಕೊಳ್ಳಬೇಕು ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ಜಿಲ್ಲಾಡಳಿತ‌ ಉಡುಪಿ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಭಗೀರಥನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಸಮಾಜದಲ್ಲಿರುವ ಅಸಮಾನತೆ, ಅಸ್ಪಶ್ಯತೆ ಹಾಗೂ ಮೌಢ್ಯಗಳನ್ನು ಹೋಗಲಾಡಿಸಲು ಶ್ರಮಿಸಿ ಸಮಾಜಕ್ಕೆ ಕೊಡುಗೆ ನೀಡಿದ ದಾರ್ಶನಿಕರ ಕುರಿತು ಯುವ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಸರಕಾರ ಜಯಂತಿ ಕಾರ್ಯಕ್ರಮ ಆಯೋಜಿಸುತ್ತಿದ್ದು, ಯುವ ಪೀಳಿಗೆ ಮಹನೀಯರ ತತ್ವ- ಆದರ್ಶಗಳನ್ನು ತಮ್ಮ ಜೀವನದಲ್ಲಿ ಆಳವಡಿಸಿಕೊಂಡಾಗ ಜಯಂತಿ ಕಾರ್ಯಕ್ರಮಗಳು ಅರ್ಥಪೂರ್ಣವಾಗುತ್ತದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ನೀರಿನಿಂದ ಉಪ್ಪು ತಯಾರಿಸಿ ಉಪ್ಪಾರ ಜನಾಂಗದವರು ಎಂದು ಕರೆಯಲ್ಪಟ್ಟರು. ಹಾಗಾಗಿ ಉಪ್ಪಾರ ಜನಾಂಗಕ್ಕೂ ಭಗೀರಥ ಮಹರ್ಷಿಗೂ ಸಂಬಂಧ ಇದೆ.


ಕೆಲಸದಲ್ಲಿ ಬದ್ಧತೆ ಮುಖ್ಯ. ಯಾವುದೇ ಕೆಲಸದ ಬಗ್ಗೆ ಬದ್ಧತೆ ಇದ್ದಲ್ಲಿ ಮಾತ್ರ ಯಶಸ್ವಿಯಾಗಲು ಸಾಧ್ಯ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕ ಕೆಲಸ ಮಾಡಬೇಕು ಎಂದರು.


ಉಪತಹಶೀಲ್ದಾರ್ ನವನೀತ್, ಜಿಲ್ಲಾಡಳಿತ ಸಿಬ್ಬಂದಿ ಮೊದಲಾದವರಿದ್ದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ವರ್ಷಾ ನಿರೂಪಿಸಿದರು. ಉಪನ್ಯಾಸಕ ರಾಮಾಂಜಿ ವಂದಿಸಿದರು.