ಕ್ಲೀನ್ ಇಂದ್ರಾಣಿ ಯೋಜನೆ ರೂಪುರೇಷೆ ಸಿದ್ಧ

ಲೋಕಬಂಧು ನ್ಯೂಸ್ ಉಡುಪಿ, ಏ.11
ಇಂದ್ರಾಣಿ ನದಿಯನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಕ್ಲೀನ್ ಇಂದ್ರಾಣಿ ಯೋಜನೆಯ ರೂಪುರೇಷೆ ಸಿದ್ಧಪಡಿಸಲಾಗಿದ್ದು, ನದಿ ಹರಿದು ಹೋಗುವ ಪ್ರದೇಶದಲ್ಲಿ ಪೂರ್ತಿ ಡ್ರೋನ್ ಸರ್ವೇ ನಡೆಸಲಾಗುತ್ತಿದೆ. ಕಲುಷಿತ ನೀರು ನದಿ ಸೇರುವ ಬಗ್ಗೆ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.ನಗರಸಭೆ ಸಭಾಂಗಣದಲ್ಲಿ ನಡೆದ ಮಳೆಗಾಲದ ಪೂರ್ವ ಸಿದ್ಧತೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.



ಬೇರೆ ಪ್ರದೇಶಗಳಿಂದ ಮಲ ತ್ಯಾಜ್ಯ ತಂದು ನದಿಗೆ ಸುರಿಯಲಾಗುತ್ತಿದೆ ಎಂಬ ದೂರುಗಳಿವೆ. ಹಾಗಾಗಿ ನಗರಸಭಾ ವ್ಯಾಪ್ತಿ ಬಿಟ್ಟು ಬೇರೆ ಪ್ರದೇಶಗಳಿಂದ ಮಲ ತ್ಯಾಜ್ಯ ತಾರದಂತೆ ಸೂಚನೆ ನೀಡಲಾಗುವುದು ಎಂದರು.


ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ನಗರದಲ್ಲಿ ನಿರಂತರ ಕುಡಿಯುವ ನೀರಿನ ಪೂರೈಕೆ ಮಾಡಬೇಕು. ಕೃತಕ ನೆರೆ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ರಾಜ ಕಾಲುವೆಗಳ ಹೂಳು ಹಾಗೂ ಅಪಾಯಕಾರಿ ಮರಗಳ ಗೆಲ್ಲುಗಳನ್ನು ತೆರವುಗೊಳಿಸಬೇಕು. ಮಳೆಗಾಲ ಆರಂಭವಾಗುವ ಮುನ್ನ ಬಾಕಿಯಿರುವ ಕಾಮಗಾರಿ ಪೂರ್ಣಗೊಳಿಸಲು ವಿಶೇಷ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಯಾವುದೇ ಕಾಮಗಾರಿ ಕೈಗೊಳ್ಳುವ ಮುನ್ನ ನಿಕಟಪೂರ್ವ ನಗರಸಭಾ ಸದಸ್ಯರಿಗೆ ಅಧಿಕಾರಿಗಳು ಮಾಹಿತಿ ಕೊಡಬೇಕು ಎಂದರು.


ಪೌರಾಯುಕ್ತ ಮಹಂತೇಶ್ ಹಂಗರಗಿ ಮಾತನಾಡಿ, ಮಳೆಗಾಲದ ಸಿದ್ಧತೆಗಾಗಿ 40 ಮಂದಿ ಹೆಚ್ಚುವರಿ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಬನ್ನಂಜೆ, ಕಿನ್ನಿಮೂಲ್ಕಿ ಮೊದಲಾದೆಡೆಗಳಲ್ಲಿ ನೆರೆ ಸಮಸ್ಯೆ ಇರುವ ಪ್ರದೇಶಗಳನ್ನು ಗುರುತಿಸಲಾಗಿದ್ದು, ಸಣ್ಣ ತೋಡುಗಳಲ್ಲಿ ಹೂಳು ತೆಗೆಯುವ ಕೆಲಸ ನಡೆಯುತ್ತಿದೆ. ಕಲ್ಮಾಡಿ ಹೊಳೆಯಲ್ಲಿ ಹೂಳು ತೆಗೆಯಲು ಬೇಡಿಕೆ ಬಂದಿದ್ದು, ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದಿಂದ 4 ಕೋಟಿ ರೂ. ಅನುದಾನ ಬಂದಿದ್ದು, 3.44 ಕೋಟಿ ರೂ. ವೆಚ್ಚದಲ್ಲಿ ಸಿವಿಲ್ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.


ವಾರಾಹಿ ಇಂಜಿನಿಯರ್ ಸುದೀಪ್ ಮಾತನಾಡಿ, ನೀರಿನ ರಭಸಕ್ಕೆ ಕೆಲವೆಡೆ ಹಳೆ ಪೈಪ್'ಗಳು ಒಡೆದು ಹೋಗುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಹೊಸ ಪೈಪ್ಲೈನ್ ಅಳವಡಿಕೆ ಮಾಡಲಾಗಿದೆ. ಇಂಥ ಸಮಸ್ಯೆ ಇರುವ 3-4 ಪ್ರದೇಶಗಳನ್ನು ಗುರುತಿಸಲಾಗಿದೆ ಎಂದರು.


ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಸದಸ್ಯರಾದ ಗಿರೀಶ್ ಅಂಚನ್, ಸುಂದರ ಕಲ್ಮಾಡಿ, ವಿಜಯ ಕೊಡವೂರು, ರಮೇಶ್ ಕಾಂಚನ್ ಮೊದಲಾದವರಿದ್ದರು.