ನಾಗರಮಠ ಅಕ್ರಮ ಮರಳುಗಾರಿಕೆಯಲ್ಲಿ ಜಿಲ್ಲಾಡಳಿತ ಶಾಮೀಲು

ಲೋಕಬಂಧು ನ್ಯೂಸ್ ಉಡುಪಿ, ಏ.11
ಬ್ರಹ್ಮಾವರ ತಾಲೂಕಿನ ಹೊಸಾಳ ಗ್ರಾಮದ ನಾಗರಮಠ ಎಂಬಲ್ಲಿ ಸೀತಾನದಿ ತಟದಲ್ಲಿ ಅಕ್ರಮ ಮರಳುಗಾರಿಕೆಗೆ ಅನುಮತಿ ನೀಡುವ ಮೂಲಕ ಜಿಲ್ಲಾಡಳಿತ ಅಕ್ರಮಗಳಲ್ಲಿ ಶಾಮೀಲಾಗಿದೆ ಎಂದು ದಿನೇಶ್ ಗಾಣಿಗ ಆರೋಪಿಸಿದರು.ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೊಸಾಳ ಗ್ರಾಮದ ನಾಗರಮಠ ಎಂಬಲ್ಲಿ ಸೀತಾನದಿಯಲ್ಲಿ ಮರಳು ದಿಬ್ಬ ತೆರವಿಗಾಗಿ 1.13 ಲಕ್ಷ ಮೆಟ್ರಿಕ್ ಟನ್ ಮರಳು ತೆಗೆಯಲು ಜಿಲ್ಲಾಡಳಿತ ಕುಶ ಕುಮಾರ್ ಎಂಬವರಿಗೆ ಜನರಲ್ ಟೆಂಡರ್ ನೀಡಿದೆ. ಆದರೆ, ನದಿಪಾತ್ರದಲ್ಲಿ ಅಷ್ಟು ಪ್ರಮಾಣದ ಮರಳು ಇಲ್ಲ ಎಂದು ನಿವೃತ್ತ ಪ್ರೊಫೆಸರ್ ಮೂಲಕ ಅಧ್ಯಯನ ನಡೆಸಿ ವರದಿ ನೀಡಿದರೂ ಜಿಲ್ಲಾಡಳಿತ ಆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಪರಿಸರ ವಿಮೋಚನಾ ಪತ್ರದಲ್ಲಿ ಒಂದು ಮೀಟರ್ ಒಳಗಿನ ಮರಳನ್ನು ಮಾತ್ರ ತೆರವುಗೊಳಿಸಬೇಕು ಎಂದು ಆದೇಶ ಇದ್ದರೂ 3-4 ಮೀ. ಆಳದಲ್ಲಿ ಮರಳು ತೆಗೆಯಲಾಗುತ್ತಿದೆ. ಹಾಗಾಗಿ ಆ ಭಾಗದ ಅದೆಷ್ಟೋ ಕೃಷಿ ಭೂಮಿಗೆ ಹಾನಿಯಾಗಿದೆ. ಆ ಕುರಿತು ಹಲವು ಬಾರಿ ಜಿಲ್ಲಾಧಿಕಾರಿ ಗಮನಕ್ಕೆ ತಂದರೂ ಈವರೆಗೆ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿಲ್ಲ. ಭೂ ಸವಕಳಿಯ ಸ್ಥಳದಲ್ಲಿ ಮರಳುಗಾರಿಕೆ ಮಾಡಬಾರದು ಎಂದು ಆದೇಶ ಇದ್ದರೂ ಜಿಲ್ಲಾಧಿಕಾರಿ ಹೂಳೆತ್ತುವ ಹೆಸರಿನಲ್ಲಿ ಮರಳು ದಂಧೆ ಮಾಡುವವರಿಗೆ ಅವಕಾಶ ನೀಡಿದ್ದಾರೆ ಎಂದು ಆರೋಪಿಸಿದರು.


ಸೀತಾನದಿಯ ಎರಡೂ ದಂಡೆಗಳಲ್ಲಿ ಮರಳುಗಾರಿಕೆಯಿಂದಾಗಿ ಕೃಷಿ ಭೂಮಿ ನಾಶವಾಗಿವೆ. ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೆ ಕೋರ್ಟ್‌ಗೆ ಹೋಗಿ ಎಂದು ಉಡಾಫೆ ಉತ್ತರ ನೀಡುತ್ತಾರೆ. ಸ್ಥಳೀಯರು ಸೇರಿ ಈ ಕುರಿತು ಪ್ರತಿಭಟನೆ ಮಾಡಿದರೆ ಪೊಲೀಸ್ ಇಲಾಖೆ ಮೂಲಕ ಕೇಸ್ ಹಾಕಿಸುತ್ತಾರೆ. ಅಕ್ರಮ ಮರಳುಗಾರಿಕೆಗೆ ಜಿಲ್ಲಾಡಳಿತ ಕುಮ್ಮಕ್ಕು ನೀಡುತ್ತಿದ್ದು, ಕಾನೂನಿಗೆ ಬೆಲೆ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಜಿಲ್ಲಾಧಿಕಾರಿ ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ. ಶಾಸಕರು, ಸಂಸದರು ಸುಮ್ಮನಿದ್ದಾರೆ. ಹೊಸಾಳ ಭಾಗದ ಜನರ ಸಮಸ್ಯೆಗೆ ಸ್ಪಂದಿಸುವಂತೆ ಆಗ್ರಹಿಸಿ ಏ.13 ಮತ್ತು 14ರಂದು ಸೀತಾನದಿ ತಟದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಅದಕ್ಕೆ ಸೂಕ್ತ ಸ್ಪಂದನೆ ಸಿಗದಿದ್ದಲ್ಲಿ ಏ.15ರಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.


ಸುದ್ದಿಗೋಷ್ಟಿಯಲ್ಲಿ ಚಂದ್ರ ಕಾಂಚನ್, ಕೃಷ್ಣ ಬಂಗೇರ, ಗಿರಿಜಾ, ರಂಗ ಮರಕಾಲ ಮೊದಲಾದವರಿದ್ದರು.