ಲೋಕಬಂಧು ನ್ಯೂಸ್ | ಕುಂದಾಪುರ, ಏ.24
ಆಜ್ರಿ ಗ್ರಾಮದ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆದ ಕಾಣಿಕೆ ಹುಂಡಿ ಕಳವು ಪ್ರಕರಣವನ್ನು ಶಂಕರನಾರಾಯಣ ಪೊಲೀಸರು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಏ.20ರಂದು ಬೆಳಿಗ್ಗೆ 7:56ರ ಸುಮಾರಿಗೆ ಹೆಲ್ಮೆಟ್ ಧರಿಸಿದ ವ್ಯಕ್ತಿಯೊಬ್ಬ ದೇವಸ್ಥಾನದ ಹೊರ ಪೌಳಿಗೆ ಬಂದು ಕಾಣಿಕೆ ಹುಂಡಿಯನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದ. ಆ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಚ್.ಡಿ. ಕುಲಕರ್ಣಿ ಹಾಗೂ ಪೊಲೀಸ್ ವೃತ್ತನಿರೀಕ್ಷಕ ಸಂತೋಷ್ ಎ. ಕಾಯ್ಕಣಿ ಮಾರ್ಗದರ್ಶನದಲ್ಲಿ ಶಂಕರನಾರಾಯಣ ಠಾಣೆಯ ಪಿಎಸ್ಐ ಐ.ಆರ್. ಗಡ್ಡೇಕರ್, ಪಿಎಸ್ಐ ಅಕ್ಷಯ ಕುಮಾರಿ ಎಸ್.ಎನ್. ಹಾಗೂ ಸಿಬ್ಬಂದಿಗಳಾದ ಸಚಿನ್ ಶೆಟ್ಟಿ, ಜಯರಾಮ ನಾಯ್ಕ್, ಚೇತನ್ ಕುಮಾರ್ ಮತ್ತು ನವೀನ್ ನಾಯ್ಕ್ ಹಾಗೂ ಕುಂದಾಪುರ ಗ್ರಾಮಾಂತರ ಠಾಣೆಯ ಮೌನೇಶ್ ನಾಯ್ಕ್ ಮತ್ತು ಜಿಲ್ಲಾ ತಾಂತ್ರಿಕ ವಿಭಾಗದ ದಿನೇಶ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಸಂದೀಪ ಆಚಾರಿ (28) ಹಾಗೂ ಮುತ್ತಪ್ಪ ಶರಣಪ್ಪ ವಾಲಿಕರ್ (40) ಎಂಬವರನ್ನು ಬಾಗಲಕೋಟೆ ಜಿಲ್ಲೆಯ ಇಳಕಲ್'ನಲ್ಲಿ ಬಂಧಿಸಿದೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್, ಮೂರು ಮೊಬೈಲ್ ಫೋನ್‌ಗಳು ಹಾಗೂ ಕಳವು ಮಾಡಲಾದ ಶ್ರೀ ಉಮಾಮಹೇಶ್ವರ ದೇವಸ್ಥಾನದ ಕಾಣಿಕೆ ಹುಂಡಿಯನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ಸುಮಾರು 1.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.