ಕಟಪಾಡಿಯಲ್ಲಿ ವೈಭವದ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ

ಲೋಕಬಂಧು ನ್ಯೂಸ್ | ಕಾಪು, ಏ.12
ಅನಿವಾಸಿ ಭಾರತೀಯ ಉದ್ಯಮಿ, ದೈವಭಕ್ತ ಕೆ.ಕೃಷ್ಣಮೋಹನ್ ಪೈ ಯುಎಸ್ಎ ಅವರ ಸಂಕಲದಂತೆ ಕಟಪಾಡಿ ವಿಜಯಾ ಪೈ ಮತ್ತು ಪುರುಷೋತ್ತಮ ಪೈ ಹಾಗೂ ಕುಟುಂಬಸ್ಥರ ವತಿಯಿಂದ ಎಸ್.ವಿ.ಎಸ್ ವಿದ್ಯಾವರ್ಧಕ ಸಂಘ ಹಾಗೂ ಕಟಪಾಡಿ ಪರಿಸರದ ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರ ಮತ್ತು ಸಂಘಸಂಸ್ಥೆಗಳ ಸಹಕಾರದಲ್ಲಿ ಕಟಪಾಡಿಯಲ್ಲಿ ಶನಿವಾರ ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಭಕ್ತಿಭಾವಪೂರ್ಣವಾಗಿ ಅತ್ಯಂತ ವೈಭವದಿಂದ ನಡೆಯಿತು.
ತಿರುಪತಿ ತಿರುಮಲ ದೇವಸ್ಥಾನ ಸಮಿತಿ ವತಿಯಿಂದ ಕಾರ್ಯಕ್ರಮ ನಡೆದಿರುವುದು ಅತ್ಯಂತ ವಿಶೇಷವಾಗಿತ್ತು.
ತಿರುಪತಿಯಿಂದಲೇ ಬಂದ ತಂಡ
ತಿರುಪತಿಯಿಂದಲೇ ಬಂದ ವೈದಿಕರ ಸಹಿತ ನಾನಾ ವಿಭಾಗಗಳ ತಂಡದೊಂದಿಗೆ ಶುಕ್ರವಾರ ರಾತ್ರಿ ಕಟಪಾಡಿಗೆ ಶ್ರೀ ದೇವರ ಆಗಮನವಾಗಿದ್ದು, ರಾತ್ರಿ ಕಟಪಾಡಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ದೇವರ ಆಗಮನವಾದಾಗ ನೆರೆದ ಭಕ್ತ ಸಮೂಹ ಭಕ್ತಿ ಭಾವದೊಂದಿಗೆ ಜೈಕಾರ ಹಾಕಿ ಸ್ವಾಗತಿಸಿದರು. ದೇವಳದ ವತಿಯಿಂದ ದೇವರಿಗೆ ನೈವೇದ್ಯ ಸಮರ್ಪಿಸಿ ಪೂಜೆ ನೆರವೇರಿಸಲಾಯಿತು.
ಊರು ಪಾವನ
ಶನಿವಾರ ಬೆಳಗ್ಗೆ ದೇವಳಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಭೇಟಿ ನೀಡಿ ದೇವರ ದರ್ಶನ ಪಡೆದು, ಕಲ್ಯಾಣೋತ್ಸವ ಹಾಗೂ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಿರುಪತಿ ಶ್ರೀ ಪದ್ಮಾವತಿ ಸಹಿತ ಶ್ರೀ ವೆಂಕಟರಮಣ ದೇವರಿಗೆ ಪೂಜೆ ನೆರವೇರಿಸಲಾಯಿತು.
ಬಳಿಕ ಆಶೀರ್ವಚನ ನೀಡಿದ ಪೇಜಾವರ ಶ್ರೀಪಾದರು, ಕಟಪಾಡಿ ಶ್ರೀ ವೆಂಕಟರಮಣನ ಸಾನ್ನಿಧ್ಯಕ್ಕೆ ತಿರುಪತಿ ವೆಂಕಟೇಶನ ಆಗಮನದಿಂದಾಗಿ ಈ ಊರು ಪಾವನವಾಯಿತು. ಶ್ರೀನಿವಾಸ ಕಲ್ಯಾಣೋತ್ಸವವನ್ನು ಭಜನೆ ಮೂಲಕ ಆರಂಭಿಸಿರುವುದು ಅದರ ಪಾವಿತ್ರ್ಯತೆ ಹೆಚ್ಚಿಸಿದೆ. ಶ್ರೀ ವೆಂಕಟೇಶಸ್ವಾಮಿ ಎಲ್ಲರನ್ನೂ ಇಷ್ಟಾರ್ಥ ಸಿದ್ಧಿಯೊಂದಿಗೆ ಹರಸಲಿ ಎಂದು ಹಾರೈಸಿದರು.


ಮೆರವಣಿಗೆಯಲ್ಲಿ ಸಾಗಿದ ದಿಬ್ಬಣ
ಕಟಪಾಡಿ ಪೇಟೆಯಿಂದ ಕಲ್ಯಾಣ ಮಂಟಪದ ವರೆಗೆ ವಿಜೃಂಭಣೆಯಿಂದ ಶ್ರೀ ದೇವರ ಶೋಭಾಯಾತ್ರೆ ಜರುಗಿತು. ಕಟಪಾಡಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮೊಕ್ಕಾಂ ಹೂಡಿದ್ದ ದೇವರನ್ನು ರಥದಲ್ಲಿ ಪದ್ಮಾವತಿ ಸಹಿತ ಶ್ರೀ ವೆಂಕಟೇಶನಿಗೆ ಭಕ್ತರ ಸಮ್ಮುಖ ಆರತಿ ಬೆಳಗಿದ ಬಳಿಕ ಕಟಪಾಡಿ ಪೇಟೆಯಿಂದ ಹೊರಟ ಮೆರವಣಿಗೆ, ತಿರುಪತಿಯಿಂದಲೇ ಆಗಮಿಸಿದ ವೈದಿಕರು ಮತ್ತು ಮಂಗಳವಾದ್ಯ ತಂಡದೊಂದಿಗೆ ಸಾಗಿಬಂತು.
ಮೆರವಣಿಗೆಯಲ್ಲಿ ಶ್ರೀಪದ್ಮಾವತಿ ದೇವರ ದಿಬ್ಬಣದಲ್ಲಿ ಸೇವಾದಾರ ಪೈ ಕುಟುಂಬದ ಮಹಿಳೆಯರು, ಶ್ರೀ ಶ್ರೀನಿವಾಸ ದೇವರ ದಿಬ್ಬಣದಲ್ಲಿ ಪೈ ಕುಟುಂಬದ ಪುರುಷರು ಸಾಗಿ ಬಂದರು. ತಿರುಪತಿ ತಂಡದ ಮಂಗಲವಾದ್ಯ ಸಹಿತ ವಿವಿಧ ಬಿರುದಾವಳಿಗಳೊಂದಿಗೆ ಕಳಶ ಹಿಡಿದ ಮಹಿಳೆಯರು, ಕುಣಿತ ಭಜನೆ, ತಟ್ಟಿರಾಯ, ಡೋಲು, ತಾಲೀಮು, ನಾಸಿಕ್ ಬ್ಯಾಂಡ್ ಸೆಟ್, ಗೊಂಬೆ, ಕೊಂಬು ವಾದ್ಯಗಳೊಂದಿಗೆ ವೈಭವದ ಶೋಭಾಯಾತ್ರೆ ನೆರವೇರಿತು.
ಶ್ರೀ ದೇವರ ಶೋಭಾಯಾತ್ರೆಯಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಕಿರಣ್ ಕುಮಾರ ಕೊಡ್ಗಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಮತಾ ಶೆಟ್ಟಿ, ಗೀತಾಂಜಲಿ ಸುವರ್ಣ, ಸುಧೀರ್ ನಾಯಕ್, ಡಾ.ಯ.ಕೆ.ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.


ಕಲ್ಯಾಣೋತ್ಸವ ಸೇವಾದಾರರಾದ ಕಟಪಾಡಿ ವಿಜಯಾ ಪೈ, ಪುರುಷೋತ್ತಮ ಪೈ, ಕೆ.ಕೃಷ್ಣಮೋಹನ್ ಪೈ ಯುಎಸ್ಎ, ಕೆ.ಸತ್ಯೇಂದ್ರ ಪೈ ಹಾಗೂ ಕುಟುಂಬಿಕರಾದ ಸುಮಿತ್ರಾ ಮತ್ತು ರಾಧಾಕೃಷ್ಣ ಕಾಮತ್, ಶಾಂತಿ ಮತ್ತು ಸುಧಾಕರ್ ಕಿಣಿ, ಜಯಲಕ್ಷ್ಮೀ ಪ್ರಭು ಮತ್ತು ಮಕ್ಕಳು, ನಿತ್ಯಾನಂದ ಕಿಣಿ ಮತ್ತು ಮಕ್ಕಳು, ಸಾಧನಾ ಪೈ, ಪ್ರೀಡಾ, ಶ್ರೇಯಸ್ ಪೈ, ಸುಪ್ರಿತಾ ಪೈ, ಕೀರ್ತನ್ ಮತ್ತು ಕಿಶನ್ ಪೈ, ಸರೋಶಾ ಮತ್ತು ಕೇತನ್ ಕಾಮತ್, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮಟ್ಟಾರು ರತ್ನಾಕರ ಕಿಣಿ ಮತ್ತು ಸದಸ್ಯರಾದ ನಿತ್ಯಾನಂದ ಶೆಣೈ, ಬಿ.ಚಂದ್ರಕಾಂತ್ ಪೈ, ವೆಂಕಟರಮಣ ಭಟ್, ಕೃಷ್ಣಾನಂದ ಕಾಮತ್, ಗಣೇಶ್ ಕಿಣಿ, ಶ್ರೀನಿವಾಸ ಕಿಣಿ, ಸುದರ್ಶನ್ ಮಲ್ಯ ಆಡಳಿತಾಧಿಕಾರಿ ಸುಧಾಕರ್ ಬ್ರಹ್ಮಾವರ, ಪ್ರಮುಖರಾದ ಮಹೇಶ್ ಅಂಚನ್, ಕಾರ್ತಿಕ್ ಪಾಲನ್, ಪ್ರೇಮ್ ಕುಮಾರ್, ಗೀತಾಂಜಲಿ ಸುವರ್ಣ, ಅಧ್ಯಕ್ಷೆ ಆಶಾ ಅಂಚನ್, ತುಳಸಿ ದೇವಾಡಿಗ, ಜಗನ್ನಾಥ್ ಕೋಟೆ, ನಾಗೇಶ್ ಕಾಮತ್, ಶಂಕರ್ ಸಾಲ್ಯಾನ್, ಶ್ರೀನಿವಾಸ ಶೆಣೈ, ಯಶವಂತ್ ದೇವಾಡಿಗ, ಉಮೇಶ್ ಕಾಮತ್, ದಿನಕರ ಪೈ, ಭಾರತಿ ಪೈ, ಅಶ್ವಿನಿ ಅಂಚನ್, ಹರಿಶ್ಚಂದ್ರ ಪೈ, ಪ್ರಶಾಂತ್, ಪ್ರಕಾಶ್ ಸುವರ್ಣ, ಜಗದೀಶ್ ಕಾಮತ್, ಹರೀಶ್ ಕಟಪಾಡಿ ಮೊದಲಾದವರಿದ್ದರು.


ಸಂಭ್ರಮದ ಕಲ್ಯಾಣೋತ್ಸವ
ತಿರುಪತಿ ತಿರುಮಲ ದೇವಸ್ಥಾನದ ನೇತೃತ್ವದಲ್ಲಿ ಅಲ್ಲಿಂದಲೇ ಆಗಮಿಸಿದ ಅರ್ಚಕ ವೃಂದದವರಿಂದ ಕಲ್ಯಾಣೋತ್ಸವದ ಧಾರ್ಮಿಕ ಅನುಷ್ಠಾನಗಳು ನಡೆದವು. ಸಂಜೆ ಶ್ರೀದೇವರ ವಿವಾಹ ಮಂಟಪ ಪ್ರವೇಶ, ವಿವಾಹ ಮಂಟಪಕ್ಕೆ ಶ್ರೀ ಪದ್ಮಾವತೀ ದೇವಿಯ ಆಗಮನ ಸೇರಿದಂತೆ ಹಲವಾರು ಕಾರ್ಯಕ್ರಮ ನಡೆಸಲಾಯಿತು.
ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿ ಶುಭ ಹಾರೈಸಿದರು. ದಾಸರ ಪದಗಳ ಹಿಮ್ಮೆಳದೊಂದಿಗೆ ನಡೆದ ಕಾರ್ಯಕ್ರಮವನ್ನು ಪುತ್ತಿಗೆ ಮಠದ ಶ್ರೀ ವಾದಿರಾಜ ಸಂಶೋಧನ ಸಂಸ್ಥೆ ನಿರ್ದೇಶಕ ಬಿ.ಗೋಪಾಲಾಚಾರ್ ನಿರೂಪಿಸಿದರು.