ವರನಟ ಡಾ.ರಾಜ್ ಬದುಕು ಅನುಕರಣ ಯೋಗ್ಯ

ಲೋಕಬಂಧು ನ್ಯೂಸ್ | ಉಡುಪಿ, ಏ.24
ಕನ್ನಡದ ವರನಟ ಡಾ.ರಾಜ್ ಕುಮಾರ್ ಜಯಂತಿ ಅಪೂರ್ವ ಕಾರ್ಯಕ್ರಮ. ಓರ್ವ ಚಿತ್ರನಟನ ಜಯಂತಿ ಕಾರ್ಯಕ್ರಮ ಆಚರಿಸುವುದು ದೇಶದಲ್ಲೇ ಅತ್ಯಂತ ಅಪೂರ್ವವಾಗಿದೆ. ರಾಜ್ ಕುಮಾರ್ ಕೇವಲ ನಟ ಮಾತ್ರವಲ್ಲ, ಅವರೊಬ್ಬ ಸರಳ- ಸಜ್ಜನ ವ್ಯಕ್ತಿ. ಸರಳತೆಯಿಂದ ಅವರು ಬದುಕಿದ ರೀತಿ ಅನುಕರಣ ಯೋಗ್ಯ. ಒಬ್ಬ ನಟನಾಗಿಯೂ ಸಮಾಜಕ್ಕೆ ಕೊಡುಗೆ ನೀಡಬಹುದು ಎಂದು ತೋರಿಸಿಕೊಟ್ಟ ಅವರ ಮಾನವೀಯ ಮೌಲ್ಯಗಳು ಜನರಿಗೆ ತಿಳಿಯಬೇಕು ಎನ್ನುವ ನಿಟ್ಟಿನಲ್ಲಿ ಅವರ ಜಯಂತಿ ಕಾರ್ಯಕ್ರಮ ನಡೆಸುತ್ತಿರುವುದು ಅರ್ಥಪೂರ್ಣ ಎಂದು ಶಾಸಕ ಯಶಪಾಲ್ ಸುವರ್ಣ ಹೇಳಿದರು.
ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ ಸಂಯುಕ್ತ ಆಶ್ರಯದಲ್ಲಿ ನಗರದ ಬ್ರಹ್ಮಗಿರಿಯ ರೆಡ್ ಕ್ರಾಸ್ ಸಭಾಂಗಣದಲ್ಲಿ ಶುಕ್ರವಾರ ನಡೆದ ವರನಟ ಡಾ.ರಾಜ್ ಕುಮಾರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಡಾ.ರಾಜ್ ಕುಮಾರ್ ಅಪಾರ ಅಭಿಮಾನಿಗಳ ಹೃದಯದ ಕಣ್ಮಣಿಯಾಗಿದ್ದರು. ಅವರು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರನ್ನು ನೋಡಲೆಂದು ಜನರು ಸಾಗರೋಪಾದಿಯಲ್ಲಿ ಬಂದಿದ್ದರು. ಅದ್ಭುತ ಗಾಯಕರಾಗಿದ್ದ ಅವರ ಕಂಠಸಿರಿಯ ಆಕರ್ಷಣೆಯೇ ಅಂಥದ್ದು. ಚಲನಚಿತ್ರಗಳಲ್ಲಿ ಅಮೋಘ ನಟನಾ ಸಾಮರ್ಥ್ಯವನ್ನು ನಮ್ಮೆಲ್ಲರಿಗೂ ತೋರಿಸಿದ ಅವರು ನಿಜ ಜೀವನದಲ್ಲಿ ನಾವು ಯಾವ ರೀತಿ ವ್ಯವಹರಿಸಬೇಕು ಎನ್ನುವುದನ್ನೂ ತೋರಿಸಿಕೊಟ್ಟಿದ್ದಾರೆ.


ಯುವಜನತೆ ಡಾ.ರಾಜ್ ಬಗ್ಗೆ ತಿಳಿದುಕೊಂಡು ಅವರ ಆಚಾರ- ವಿಚಾರ ಮತ್ತು ಅವರ ಜೀವನದ ಮೌಲ್ಯಗಳನ್ನು ತಮ್ಮ ಜೀವನದಲ್ಲಿಯೂ ಅಳವಡಿಸಿಕೊಂಡು ಸಾಧನೆ ಮಾಡಬೇಕು ಎಂದರು.


ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್ ಕ್ರಾಸ್ ರಾಜ್ಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ತನ್ನ ಜೀವಿತಾವಧಿಯಲ್ಲಿ ಸಾಧನೆಗಳ ಸರಮಾಲೆಯನ್ನೇ ಮುಡಿಗೇರಿಸಿಕೊಂಡಿದ್ದ ಡಾ. ರಾಜ್ ಕುಮಾರ್ ನಟನೆಯಲ್ಲಿ ನೈಜತೆಯಿಂದಾಗಿ ಜನಮಾನಸದಲ್ಲಿ ಮೇರುನಟನಾಗಿ ಅಚ್ಚಳಿಯದೆ ಉಳಿದಿದ್ದಾರೆ. ಕನ್ನಡ ನಾಡು ನುಡಿಯ ಬಗ್ಗೆ ಒಲವು ಹೊಂದಿದ್ದ ದೊಡ್ಡ ಕಲಾವಿದನಾಗಿಯೂ ಸರಳ ಜೀವನ ನಡೆಸಿದ್ದ ಅವರ ಜೀವನ ಮೌಲ್ಯಗಳು ಪ್ರತಿಯೊಬ್ಬರಿಗೂ ಆದರ್ಶಪ್ರಾಯ ಎಂದರು.


ಡಾ.ರಾಜ್ ಕುಮಾರ್ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಚಲನಚಿತ್ರ ಕಲಾವಿದೆ ಪ್ರತಿಮಾ ನಾಯಕ್, ಹೆಚ್ಚು ವಿದ್ಯಾಭ್ಯಾಸ ಮಾಡಿರದಿದ್ದರೂ ತನ್ನ ಅಭಿಜಾತ ಕಲಾ ಪ್ರತಿಭೆಗಾಗಿ ಡಾಕ್ಟರೇಟ್ ಪದವಿ ಪಡೆದ ಡಾ.ರಾಜ್ ಜೀವನವೇ ಒಂದು ದಂತಕಥೆ.


ಗುಬ್ಬಿ ವೀರಣ್ಣ ನಾಟಕ ಕಂಪನಿಯಿಂದ ನಟನಾ ಜೀವನ ಆರಂಭಿಸಿ ನಾಟಕಗಳಲ್ಲಿ ಅಭಿನಯಿಸಿ ನಂತರ 'ಬೇಡರ ಕಣ್ಣಪ್ಪ' ಚಿತ್ರದ ಮೂಲಕ ಭಕ್ತಿ ಪ್ರಧಾನ ಹಾಗೂ ಪೌರಾಣಿಕ ಪಾತ್ರದಲ್ಲಿ ಮಿಂಚಿ ಐತಿಹಾಸಿಕ ಚಿತ್ರಗಳ ಭಾಗವಾಗಿ ಎಲ್ಲ ನಟರಿಗೂ ಪ್ರೇರಣೆಯಾಗಿದ್ದಾರೆ.


ಚಿತ್ರಗಳ ಮೂಲಕ ಸಾಮಾಜಿಕ ಸಂದೇಶ ನೀಡಿ ಸಮಾಜದಲ್ಲಿ ಪರಿವರ್ತನೆಗೆ ಕಾರಣರಾಗಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದನಾಗಿದ್ದರೂ ಸಹ-ಕಲಾವಿದರೊಂದಿಗೆ ಯಾವುದೇ ಹಮ್ಮು-ಬಿಮ್ಮುಗಳಿಲ್ಲದೇ ನಟಿಸುತ್ತಿದ್ದ ಅವರು ಇಂದಿನ ನಟರಿಗೆ ಮಾದರಿ ಎಂದರು.


ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಡಾ.ರಾಜ್ ಕುಮಾರ್ ಕನ್ನಡ ಚಿತ್ರರಂಗದಲ್ಲಿ ಐದು ದಶಕಗಳ ಕಾಲ 212 ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ. ನಟನೆ ಮಾತ್ರವಲ್ಲದೆ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದ ಅವರು ಕನ್ನಡ ಏಕೀಕರಣ ಚಳುವಳಿಯ ಸೇನಾನಿಯಾಗಿದ್ದರು‌ ರಾಷ್ಟ್ರದ ಅತ್ಯುನ್ನತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯಿಂದ ದೊರೆತ ಹಣವನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ದೇಣಿಗೆ ನೀಡಿ ತಮ್ಮ ಕನ್ನಡ ಪ್ರೇಮವನ್ನು ಜಗಜ್ಜಾಹೀರು ಮಾಡಿದ್ದಾರೆ.


ಸಂತ್ರಸ್ತರ ನಿಧಿ, ಆಸ್ಪತ್ರೆಗಳು ಮತ್ತು ಸಾಮಾಜಿಕ ಕಾರ್ಯಗಳಿಗೆ ಸಹಾಯಾರ್ಥವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಡುವುದರೊಂದಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಅವರ ಭಾಷಾ ಶುದ್ದತೆ, ಜೀವನದ ಮೌಲ್ಯ, ಹಿರಿಯರಿಗೆ ನೀಡುತ್ತಿದ್ದ ಗೌರವ ಮತ್ತು ಪರೋಪಕಾರ ಪ್ರವೃತ್ತಿ ಎಲ್ಲವೂ ಅನುಕರಣೀಯ ಎಂದರು.


ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರಾದ ದಿಶಾ ಮತ್ತು ದಿಯಾ ಅವರು ಡಾ.ರಾಜ್ ಕುಮಾರ್ ಚಿತ್ರಗೀತೆಗಳನ್ನು ಹಾಡಿದರು. ಲಯನ್ಸ್ ಮಿಡ್ ಟೌನ್ ಅಧ್ಯಕ್ಷ ಪುರುಷೋತ್ತಮ ನಾಯಕ್, ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ ಮೊದಲಾದವರಿದ್ದರು.



ರೆಡ್ ಕ್ರಾಸ್ ಸಂಸ್ಥೆ ಉಡುಪಿ ಘಟಕದ ಕಾರ್ಯದರ್ಶಿ ಡಾ.ಗಣನಾಥ ಶೆಟ್ಟಿ ಎಕ್ಕಾರು ನಿರೂಪಿಸಿ, ಖಜಾಂಚಿ ರಮಾದೇವಿ ವಂದಿಸಿದರು.