ದೇವಳ ಜೀರ್ಣೋದ್ಧಾರ ವಿಜ್ಞಾಪನಾ ಪತ್ರ ಬಿಡುಗಡೆ

ಲೋಕಬಂಧು ನ್ಯೂಸ್ ಉಡುಪಿ, ಏ.21
ಹಿರೇಬೆಟ್ಟು ಗ್ರಾಮದ ಭಟ್ರಕೋಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಅಂಗವಾಗಿ ವಿಜ್ಞಾಪನಾ ಪತ್ರ ಬಿಡುಗಡೆ ನಡೆಯಿತು.ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ವಿಜ್ಞಾಪನಾ ಪತ್ರವನ್ನು ಬಿಡುಗಡೆ ಮಾಡಿ, ಜನರು ಒಂದೆಡೆ ಸೇರಿ ಮಾಡುವ ಕೆಲಸ ಯಶಸ್ವಿಯಾಗುತ್ತದೆ. ಮಣಿಪಾಲ ಇಂದು ಈ ಮಟ್ಟಕ್ಕೆ ಜನರಿಂದಲೇ ಬೆಳೆದಿದೆ ಎಂದು ಉದಾಹರಿಸಿದರು.


ಇತರ ಧರ್ಮೀಯರು ವಾರದಲ್ಲಿ ಒಂದು ದಿನ ತಮ್ಮ ಅರಾಧನಾ ಸ್ಥಳಗಳಿಗೆ ತಪ್ಪದೇ ಹೋಗುತ್ತಾರೆ. ನಾವು ಕೂಡಾ ದೇವಾಲಯಗಳಿಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು. ಆಗ ಧರ್ಮದ ಜಾಗೃತಿಯಾಗುತ್ತದೆ. ದೇವಾಲಯಗಳು ಸುಸ್ಥಿತಿಯಲ್ಲಿ ಉಳಿಯುತ್ತವೆ.


ಪುರಾತನ ದೇವಾಲಯದ ಜೀರ್ಣೋದ್ಧಾರ ಕಾರ್ಯ ಸರ್ವರ ಸಹಭಾಗಿತ್ವದಿಂದ ನಡೆಯಲಿ ಎಂದು ಹಾರೈಸಿದರು.


ಸಂಸದ ಕೋಟ ಶ್ರೀನಿವಾಸ ಪೂಜಾರಿ, ದೇವಳ ಜೀರ್ಣೋದ್ಧಾರದಂಥ ಕೆಲಸಗಳು ಊರವರನ್ನು ಪಕ್ಷಬೇಧ ಮರೆತು ಒಂದೆಡೆ ಸೇರಿಸಲು, ಸೌಹಾರ್ದತೆಗೆ ಕಾರಣವಾಗುತ್ತವೆ. ಹಣ ಇಲ್ಲದೇ ದೇವಾಲಯಗಳ ಕೆಲಸ ನಿಂತ ಉದಾಹರಣೆಗಳಿಲ್ಲ. ಊರವರು ಸೇರಿ ನಿಷ್ಠೆ, ಭಕ್ತಿಯಿಂದ ಕೆಲಸ ಮಾಡಿದಾಗ ಅಸಾಧ್ಯವಾದ ಕೆಲಸವೂ ಸಾಧ್ಯವಾಗುತ್ತದೆ ಎನ್ನುವುದಕ್ಕೆ ಕುಗ್ರಾಮಗಳಲ್ಲಿರುವ ದೇವಾಲಯಗಳು ಜೀರ್ಣೋದ್ಧಾರಗೊಂಡಿರುವುದೇ ಸಾಕ್ಷಿ ಎಂದರು.


ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ದೇವಾಲಯಗಳ ಜಿರ್ಣೋದ್ಧಾರ ಎಂದರೆ ದೈವ ಋಣ ಮತ್ತು ಸಮಾಜ ಋಣ ತೀರಿಸುವುದಕ್ಕೊಂದು ಸದವಕಾಶ. ಈ ಸದವಕಾಶವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳೋಣ ಎಂದರು.



ಮಾಜಿ ಸಚಿವ ವಿನಯಕುಮಾರ್ ಸೊರಕೆ, ನಮ್ಮ ಮನೆಗಳು ಚೆನ್ನಾಗಿದ್ದರೆ ಸಾಲದು, ಊರಿನ ದೇವಸ್ಥಾನಗಳೂ ಚೆನ್ನಾಗಿರಬೇಕು. ಆಗ ಮಾತ್ರ ಊರಿಗೆ ಹಿತವಾಗುತ್ತದೆ. ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಗಳಿಗೆ ತಾನು ಕೈಜೋಡಿಸುವುದಾಗಿ ಭರವಸೆ ನೀಡಿದರು.


ಮಣಿಪಾಲ ವೈಷ್ಣವಿ ದುರ್ಗಾ ದೇವಾಲಯದ ಅಧ್ಯಕ್ಷ ಜಯರಾಜ್ ಹೆಗ್ಡೆ ಮತ್ತು ದೇವಳದ ಅರ್ಚಕ ಕುಟುಂಬದ ಸೀತಾರಾಮ ಭಟ್ ವೇದಿಕೆಯಲ್ಲಿದ್ದರು.


ಅಧ್ಯಕ್ಷತೆ ವಹಿಸಿದ್ಧ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರಿನಿಧಿ ಹೆಗ್ಡೆ ಹಿರೇಬೆಟ್ಟು ಸ್ವಾಗತಿಸಿದರು. ಗೌರವಾಧ್ಯಕ್ಷ ಬೆಲ್ಪತ್ರೆ ಸಚ್ಚಿದಾನಂದ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದಿನೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿ, ಚಂದ್ರಶೇಖರ ನಾಯಕ್ ವಂದಿಸಿದರು.