ಲೋಕಬಂಧು ನ್ಯೂಸ್ ಉಡುಪಿ, ಏ.21
ಇತ್ತೀಚೆಗೆ ಅಗಲಿದ ಹಿರಿಯ ಪತ್ರಕರ್ತ ಗಣೇಶ್ ಪ್ರಭು ಅವರಿಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಭೆಯನ್ನು ಮಂಗಳವಾರ ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಲಾಯಿತು.ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಪತ್ರಕರ್ತರಿಗೆ ಇರಬೇಕಾದ ಎಲ್ಲಾ ಉತ್ತಮ ಗುಣಗಳು ಗಣೇಶ್ ಪ್ರಭು ಅವರಲ್ಲಿದ್ದವು. ಅವರ ವ್ಯಕ್ತಿತ್ವ ಇಂದಿನ ಪತ್ರಕರ್ತರಿಗೆ ಮಾದರಿ. ಪತ್ರಿಕಾಗೋಷ್ಠಿಗಳಲ್ಲಿ ಅವರು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರ ನೀಡುವುದು ಬಹಳ ಕಷ್ಟವಾಗುತ್ತಿತ್ತು ಹಾಗೂ ಕೆಲವೊಮ್ಮೆ ಮಾನಸಿಕವಾಗಿ ವಿಚಲಿತರಾಗುತ್ತಿದ್ದುದೂ ಉಂಟು ಎಂದರು.
ಹಿರಿಯ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಮಾತನಾಡಿ, ಗಣೇಶ್ ಪ್ರಭು ಯಾವುದೇ ಮುಲಾಜಿಲ್ಲದೆ ನೇರವಾಗಿ ಮಾತನಾಡುತ್ತಿದ್ದರು. ಅದರಿಂದ ಕೆಲವರು ಅವರನ್ನು ಇಷ್ಟಪಡುತ್ತಿರಲಿಲ್ಲ. ಅವರು ಯಾರಿಗೂ ಹೆದರದೇ ಎಲ್ಲವನ್ನೂ ನೇರವಾಗಿ ಪ್ರಶ್ನಿಸುತ್ತಿದ್ದರು. ಪ್ರಾಮಾಣಿಕ ಪತ್ರಕರ್ತರಾಗಿದ್ದ ಅವರು ಎಂದಿಗೂ ಹಣವನ್ನು ಬಯಸಲಿಲ್ಲ. ಪುಸ್ತಕಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದ ಅವರು ನಿರಂತರ ಓದು ಹವ್ಯಾಸ ಬೆಳೆಸಿಕೊಂಡಿದ್ದರು. ಯುವ ಪತ್ರಕರ್ತರಿಗೆ ಅವರು ಮಾದರಿ ಎಂದರು.
ಹಿರಿಯ ಚಿಂತಕ ಪ್ರೊ. ಫಣಿರಾಜ್ ಮಾತನಾಡಿ, ಗಣೇಶ್ ಪ್ರಭು ಯಾವುದೇ ಪಕ್ಷಕ್ಕೂ ಬದ್ಧರಾಗಿರದೆ, ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಸ್ವಾತಂತ್ರ್ಯ ಚಳವಳಿ ಹಾಗೂ ಸಂವಿಧಾನ ಮೌಲ್ಯಗಳಿಗೆ ಮಾತ್ರ ಬದ್ಧರಾಗಿದ್ದರು. ಸಾರ್ವಜನಿಕ ವಿಷಯಗಳನ್ನು ಗ್ರಹಿಸುವಾಗ ಹಾಗೂ ವರದಿ ಮಾಡುವಾಗ ಆ ಮೌಲ್ಯಗಳನ್ನು ಎಂದಿಗೂ ಬಿಟ್ಟು ಹೋಗುತ್ತಿರಲಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸುವ ಕಠಿನತೆಯನ್ನು ಕೊನೆಯ ವರೆಗೂ ಪಾಲಿಸಿಕೊಂಡು ಬಂದಿದ್ದರು ಎಂದರು.
ದಸಂಸ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್, ಮಣಿಪಾಲ ಗಾಂಧಿಯನ್ ಸೆಂಟರ್ ಫಾರ್ ಫಿಲೋಸೋಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸ್ ಮಾಜಿ ನಿರ್ದೇಶಕ ವರದೇಶ್ ಹೀರೆಗಂಗೆ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ, ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ, ಮಾಜಿ ಅಧ್ಯಕ್ಷರಾದ ದಿನೇಶ್ ಕಿಣಿ, ಗೋಕುಲ್‌ದಾಸ್ ಪೈ, ಕಿರಣ್ ಮಂಜನಬೈಲು, ರಾಜೇಶ್ ಶೆಟ್ಟಿ ಸೇರಿದಂತೆ ಹಲವರು ನುಡಿನಮನ ಸಲ್ಲಿಸಿದರು.
ಪತ್ರಕರ್ತರಾದ ಹರ್ಷರಾಜ್, ಬಿ.ಬಿ. ಶೆಟ್ಟಿಗಾರ್, ಶಶಿಧರ್ ಮಾಸ್ತಿಬೈಲು, ಉಮೇಶ್ ಮಾರ್ಪಳ್ಳಿ, ಗೋಪಾಲಕೃಷ್ಣ ಪಾದೂರು, ದಿವಾಕರ್ ಭಂಡಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಭೆಯಲ್ಲಿ ಸಿಐಟಿಯು ಮುಖಂಡ ಕವಿರಾಜ್ ಎಸ್., ದಸಂಸ ಮುಖಂಡರಾದ ಮಂಜುನಾಥ್ ಗಿಳಿಯಾರು, ಶ್ಯಾಮ್‌ರಾಜ್ ಬಿರ್ತಿ, ಸಂಘದ ಕೋಶಾಧಿಕಾರಿ ಹರೀಶ್ ಕುಂದರ್ ಮೊದಲಾದವರಿದ್ದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಝೀರ್ ವಂದಿಸಿದರು. ರಹೀಂ ಉಜಿರೆ ಕಾರ್ಯಕ್ರಮ ನಿರೂಪಿಸಿದರು.