ಅಮೆರಿಕಾ ಅಧ್ಯಕ್ಷ ಟ್ರಂಪ್ ಮೇಲೆ ಗುಂಡಿನ ದಾಳಿ!
ಲೋಕಬಂಧು ನ್ಯೂಸ್ ವಾಷಿಂಗ್ಟನ್, ಏ.26
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಲ್ಗೊಂಡಿದ್ದ ಪ್ರತಿಷ್ಠಿತ ಗಾಲಾ ಡಿನ್ನರ್ ಕಾರ್ಯಕ್ರಮದ ವೇಳೆ ಶನಿವಾರ ರಾತ್ರಿ ಗುಂಡಿನ ದಾಳಿ ನಡೆದಿದ್ದು, ಇಡೀ ಪ್ರದೇಶ ಕ್ಷಣಾರ್ಧದಲ್ಲಿ ರಣರಂಗವಾಗಿ ಮಾರ್ಪಟ್ಟಿತು.
ಅಧ್ಯಕ್ಷರಾಗಿ ಮೊದಲ ಬಾರಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಟ್ರಂಪ್ ಅವರನ್ನು ಭದ್ರತಾ ಪಡೆಗಳು ತಕ್ಷಣ ಸ್ಥಳದಿಂದ ಸುರಕ್ಷಿತವಾಗಿ ಸ್ಥಳಾಂತರಿಸಿವೆ.
ಕಾರ್ಯಕ್ರಮ ಪ್ರಾರಂಭವಾದ ಕೆಲವೇ ಕ್ಷಣಗಳಲ್ಲಿ ಹಜಾರದ ಪ್ರವೇಶ ದ್ವಾರದ ಬಳಿ ದೊಡ್ಡ ಶಬ್ದ ಕೇಳಿಸಿತು. ಆರಂಭದಲ್ಲಿ ಯಾವುದೋ ಟ್ರೇ ಕೆಳಗೆ ಬಿದ್ದಿರಬಹುದು ಎಂದು ಭಾವಿಸಲಾಗಿತ್ತು. ಆದರೆ, ಅದು ಗುಂಡಿನ ಚಕಮಕಿ ಎಂದು ತಿಳಿದುಬರುತ್ತಿದ್ದಂತೆ ಅಲ್ಲಿ ನೆರೆದಿದ್ದ ಸಚಿವರು ಮತ್ತು ಗಣ್ಯರು ಜೀವ ಭಯದಿಂದ ಟೇಬಲ್‌ಗಳ ಕೆಳಗೆ ಅವಿತು ಕುಳಿತುಕೊಂಡರು.
ಪ್ರತ್ಯಕ್ಷದರ್ಶಿಗಳ ಪ್ರಕಾರ, ದಾಳಿಕೋರ ಶಾಂತವಾಗಿ ಬಂದು ತನ್ನ ಜಾಕೆಟ್ ಎಸೆದು, ಭದ್ರತಾ ತಪಾಸಣಾ ಕೇಂದ್ರದತ್ತ ಗುಂಡು ಹಾರಿಸುತ್ತಾ ನುಗ್ಗಿದ.
ಘಟನೆಯಲ್ಲಿ ಸೀಕ್ರೆಟ್ ಸರ್ವಿಸ್ ಅಧಿಕಾರಿಯೊಬ್ಬರಿಗೆ ಗುಂಡು ತಗುಲಿದ್ದು, ಅವರು ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಂತರ ಶ್ವೇತಭವನದಲ್ಲಿ ಮಾತನಾಡಿದ ಅಧ್ಯಕ್ಷ ಟ್ರಂಪ್, 'ಇಂಥ ಘಟನೆಗಳು ನಿಜಕ್ಕೂ ಆಘಾತಕಾರಿ. ಆದರೆ, ರಾಜಕೀಯ ಎಂಬುದು ಅಪಾಯಕಾರಿ ಕೆಲಸ ಮತ್ತು ಇದು ಸಾಮಾನ್ಯ' ಎಂದು ಶಾಂತವಾಗಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ಪರಿಸ್ಥಿತಿಯನ್ನು ಅದ್ಭುತವಾಗಿ ನಿಭಾಯಿಸಿದ ಭದ್ರತಾ ಪಡೆಗಳನ್ನು ಶ್ಲಾಘಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಬಂದೂಕು ಮತ್ತು ಚಾಕು ಹೊಂದಿದ್ದ ಒಬ್ಬನೇ ವ್ಯಕ್ತಿ ಈ ಕೃತ್ಯ ಎಸಗಿದ್ದು, ಆತನನ್ನು ಈಗಾಗಲೇ ಬಂಧಿಸಲಾಗಿದೆ. ಈ ದಾಳಿಕೋರನ ವಿರುದ್ಧ ಫೆಡರಲ್ ಅಧಿಕಾರಿಯ ಮೇಲೆ ಹಲ್ಲೆ ಮತ್ತು ಮಾರಕಾಸ್ತ್ರ ಬಳಕೆಯ ಗಂಭೀರ ಪ್ರಕರಣ ದಾಖಲಿಸಲಾಗಿದೆ. ಘಟನೆಯಲ್ಲಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಮಾರ್ಕೊ ರೂಬಿಯೋ ಅವರಂಥ ಉನ್ನತ ಮಟ್ಟದ ನಾಯಕರು ಉಪಸ್ಥಿತರಿದ್ದರು.
2024ರ ಬಟ್ಲರ್ ಹತ್ಯೆಯ ಯತ್ನ ನೆನಪಿಸುವಂತಿದ್ದ ಈ ದಾಳಿ ಅಮೆರಿಕಾದ ಅತ್ಯಂತ ಸುರಕ್ಷಿತವೆಂದು ಪರಿಗಣಿಸಲಾದ ಕಾರ್ಯಕ್ರಮಗಳ ಭದ್ರತೆ ಬಗ್ಗೆ ಇದೀಗ ದೊಡ್ಡ ಪ್ರಶ್ನೆ ಮೂಡಿದೆ.
ಟ್ರಂಪ್ ಮೇಲಿನ ದಾಳಿಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಸಹಿತ ವಿವಿಧ ರಾಷ್ಟ್ರಗಳ ನಾಯಕರು ಖಂಡಿಸಿದ್ದಾರೆ.