ಲೋಕಬಂಧು ನ್ಯೂಸ್ ಉಡುಪಿ, ಮೇ 12
ಜ್ಞಾನ ಭಾರತಂ ಮಿಷನ್ ಯೋಜನೆಯಡಿ ದೇಶದಲ್ಲಿ ಶತಮಾನಗಳಷ್ಟು ಹಳೆಯ ಕೈಬರಹಗಳು, ಹಸ್ತಪ್ರತಿಗಳು ಮತ್ತಿತರ ದಾಖಲೆಗಳನ್ನು ತಂತ್ರಜ್ಞಾನದ ಮೂಲಕ ಶಾಶ್ವತವಾಗಿ ಉಳಿಸುವ ಡಿಜಿಟಲೀಕರಣ ಕಾರ್ಯ ನಡೆಯುತ್ತಿದ್ದು, ಅದಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಿ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಕರೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜ್ಞಾನ ಭಾರತಂ ಮಿಷನ್ ಯೋಜನೆಯಡಿ ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವ ಕುರಿತು ಸೋಮವಾರ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಂದ್ರ ಸರ್ಕಾರದ ಜ್ಞಾನ ಭಾರತಂ ಮಿಷನ್ ಯೋಜನೆಯಡಿ ರಾಷ್ಟ್ರದಾದ್ಯಂತ ಲಭ್ಯವಿರುವ ಶತಮಾನಗಳಷ್ಟು ಹಳೆಯ ಕೈಬರಹದ ಪಠ್ಯಗಳು, ಹಸ್ತಪ್ರತಿಗಳು ಮತ್ತು ದಾಖಲೆಗಳನ್ನು ಸಂಗ್ರಹಿಸಿ ಇಂದಿನ ತಂತ್ರಜ್ಞಾನದ ಮೂಲಕ ಶಾಶ್ವತವಾಗಿ ಉಳಿಸಲು ಅವುಗಳ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ತಮ್ಮಲ್ಲಿರುವ ಹಳೆಯ ಕೈಬರಹ, ಹಸ್ತಪ್ರತಿ, ದಾಖಲೆಗಳನ್ನು ನೇರವಾಗಿ ಜ್ಞಾನ ಭಾರತಂ ಆ್ಯಪ್ ಮೂಲಕ ಅಪ್‌ಲೋಡ್ ಮಾಡಬಹುದು ಅಥವಾ ಮಾಹಿತಿ ನೀಡಿದ್ದಲ್ಲಿ ಸಮೀಕ್ಷೆದಾರರು ತಮ್ಮಲ್ಲಿಗೇ ಬಂದು ದಾಖಲಿಸಿಕೊಳ್ಳಲಿದ್ದಾರೆ.
ಐತಿಹಾಸಿಕ ದಾಖಲೆಗಳ ಸಮೀಕ್ಷೆ, ಸಂರಕ್ಷಣೆ, ರಕ್ಷಣೆ, ಡಿಜಿಟಲೀಕರಣ, ನೋಂದಣಿ, ವಿಮರ್ಶಾತ್ಮಕ ಸಂಪಾದನೆ, ಅನುವಾದ ಮತ್ತು ಪ್ರಕಟಣೆ ಮೂಲಕ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಒಂದೇ ರಾಷ್ಟ್ರೀಯ ವೇದಿಕೆ ಮೂಲಕ ಸಾರ್ವಜನಿಕರಿಗೆ ಒದಗಿಸಲಾಗುತ್ತದೆ.
ಭವಿಷ್ಯದ ಪೀಳಿಗೆಗೆ ಅವುಗಳ ಜ್ಞಾನ ಸಂಪತ್ತಿನ ಸಂರಕ್ಷಣೆ ಮತ್ತು ಬಳಕೆಗೆ ಹಸ್ತಪ್ರತಿಗಳ ಸಂರಕ್ಷಣೆ ಹಾಗೂ ಡಿಜಿಟಲೀಕರಣ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲೆಯ ಎಲ್ಲಾ ವಿಶ್ವವಿದ್ಯಾಲಯಗಳು, ವಸ್ತುಸಂಗ್ರಹಾಲಯಗಳು, ಸಂಘಸಂಸ್ಥೆಗಳು, ಮಠಗಳು ಮತ್ತು ವ್ಯಕ್ತಿಗಳ ಬಳಿ ಇರುವ ಹಸ್ತಪ್ರತಿಗಳನ್ನು ದಾಖಲೀಕರಣಗೊಳಿಸಬೇಕಾಗಿದ್ದು, ಈ ಮಹತ್ವದ ಕಾರ್ಯಕ್ಕೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ಖಾಸಗಿ ಸಂಶೋಧನಾ ಕೇಂದ್ರಗಳು, ಸಂಘಸಂಸ್ಥೆಗಳು, ಮಠಗಳು ಮತ್ತು ದಾಖಲೆ ಹೊಂದಿರುವ ವ್ಯಕ್ತಿ, ಕುಟುಂಬಗಳು ಜಿಲ್ಲಾಡಳಿತದೊಂದಿಗೆ ಕೈಜೋಡಿಸುವ ಅಗತ್ಯವಿದ್ದು ಪ್ರತಿಯೊಬ್ಬರೂ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಜಿಲ್ಲೆಯಲ್ಲಿ ಹಸ್ತ ಪ್ರತಿಗಳ ಡಿಜಿಟಲೀಕರಣ ಕೈಗೊಂಡಿರುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಮಾಧ್ಯಮಗಳ ಮೂಲಕ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು ಎಂದ ಅವರು, ಹಸ್ತಪ್ರತಿಗಳು ಇರುವ ಬಗ್ಗೆ ನಿಖರ ಮಾಹಿತಿ ಕಲೆಹಾಕಬೇಕು. ಈ ಸಂಬಂಧ ವಿವಿಧ ಸಮುದಾಯದವರು, ಅರ್ಚಕರು, ತಂತ್ರಿಗಳು ಮತ್ತಿತರರ ಸಭೆ ಕರೆಯಬೇಕು. ಅರಿವು ಕಾರ್ಯಕ್ರಮಗಳನ್ನು ಆಂದೋಲನದ ರೀತಿಯಲ್ಲಿ ಮಾಡಿದಾಗ ಮಾತ್ರ ಜಿಲ್ಲೆಯಲ್ಲಿ ಸಂಪೂರ್ಣ ಡಿಜಿಟಲೀಕರಣ ಸಾಧ್ಯ ಎಂದರು.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂಧ್ಯಾ ಎನ್. ಎಂ., ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ, ಪೌರಾಯುಕ್ತ ಮಹಾಂತೇಶ್ ಹಂಗರಗಿ, ವಾರ್ತಾಧಿಕಾರಿ ಮಂಜುನಾಥ್ ಬಿ., ಜ್ಞಾನ ಭಾರತಂ ಉಡುಪಿ ಜಿಲ್ಲಾ ಮಟ್ಟದ ಸಂಯೋಜಕ ಡಾ.ಗೋಪಾಲಾಚಾರ್, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಧನಲಕ್ಷ್ಮೀ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕ ಡಾ.ಬಿ. ಜಗದೀಶ್ ಶೆಟ್ಟಿ ಮೊದಲಾದವರಿದ್ದರು.