ಲೋಕಬಂಧು ನ್ಯೂಸ್ ಉಡುಪಿ, ಮೇ 6
ಮಲ್ಪೆ ಸಮೀಪದ ತೊಟ್ಟಂ ಸಂತ ಅನ್ನಮ್ಮ ಚರ್ಚಿನ ನೂತನ ಧರ್ಮಗುರುಗಳಾಗಿ ಅಜೆಕಾರು ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಚರ್ಚ್‌ನಲ್ಲಿ ಧರ್ಮಗುರುಗಳಾಗಿದ್ದ ವಂ.ಹೆನ್ರಿ ಮಸ್ಕರೇನ್ಹಸ್ ನಿಯುಕ್ತರಾಗಿದ್ದು, ಅವರು ಬುಧವಾರ ಅಧಿಕಾರ ವಹಿಸಿಕೊಂಡರು.ಪ್ರಸ್ತುತ ಧರ್ಮಗುರುಗಳಾಗಿರುವ ವಂ.ಡೆನಿಸ್ ಡೆಸಾ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷೆ ಲೆಸ್ಲಿ ಆರೋಝಾ ಅವರು ನೂತನ ಧರ್ಮಗುರುಗಳನ್ನು ಚರ್ಚಿಗೆ ಆತ್ಮೀಯವಾಗಿ ಬರಮಾಡಿಕೊಂಡರು.
ಕಲ್ಯಾಣಪುರ ವಲಯ ಪ್ರಧಾನ ಧರ್ಮಗುರು ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್ ಅವರು ಅಧಿಕಾರ ಸ್ವೀಕಾರ ಸಮಾರಂಭದ ವಿಧಿ-ವಿಧಾನಗಳ ನೇತೃತ್ವ ವಹಿಸಿದ್ದರು.
ಚರ್ಚ್‌ನ ಧರ್ಮಗುರುಗಳಾಗಿ ಅಧಿಕಾರ ಸ್ವೀಕರಿಸಿದ ವಂ.ಹೆನ್ರಿ ಮಸ್ಕರೇನ್ಹಸ್ ಅವರು ಚರ್ಚಿನ ಸದಸ್ಯರು ತನಗೆ ನೀಡಿದ ಸ್ವಾಗತದಿಂದ ತುಂಬಾ ಭಾವುಕರಾಗಿದ್ದೇನೆ. ಚರ್ಚ್ ಆವರಣಕ್ಕೆ ಪ್ರವೇಶಿಸಿದಾಗ ಸಕಾರಾತ್ಮಕ ಸ್ಪೂರ್ತಿ ಮತ್ತು ಸಂತೋಷಭರಿತ ವಾತಾವರಣ ಅನುಭವಿಸಿದೆ. ಇಲ್ಲಿ ಸೇವೆ ನೀಡಿದ ವಂ.ಡೆನಿಸ್ ಡೆಸಾ ಅವರ ಪ್ರೇರಣೆ ಮತ್ತು ಮಾರ್ಗದರ್ಶನ ಅದಕ್ಕೆ ಕಾರಣ ಎಂದರು.
ನಿರ್ಗಮನ ಧರ್ಮಗುರು ವಂ.ಡೆನಿಸ್ ಡೆಸಾ ಮಾತನಾಡಿ, ಕಳೆದ ನಾಲ್ಕು ವರ್ಷಗಳಲ್ಲಿ ತೊಟ್ಟಂ ಚರ್ಚ್‌ನ ಪ್ರತಿಯೊಬ್ಬ ಸದಸ್ಯರ ಪ್ರೀತಿ ಮತ್ತು ಆರೈಕೆಯನ್ನು ಅನುಭವಿಸಿದ್ದೇನೆ. ತೊಟ್ಟಂ ಸದಸ್ಯರು ಚರ್ಚ್‌ನ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ನೂತನ ಧರ್ಮಗುರುಗಳಿಗೂ ಅದೇ ರೀತಿಯ ಸಹಕಾರ, ಪ್ರೀತಿ ನೀಡುವಂತೆ ವಿನಂತಿಸಿದರು.
ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಧರ್ಮಗುರು ವಂ.ಆಲ್ಬನ್ ಡಿ'ಸೋಜಾ, ಆಧ್ಯಾತ್ಮಿಕ ಧರ್ಮಗುರು ವಂ.ರೋಮನ್ ಮಸ್ಕರೇನ್ಹಸ್, ಕಣಜಾರು ಲೂರ್ಡ್ ಮಾತೆಯ ಚರ್ಚ್ ಧರ್ಮಗುರು ವಂ.ಹೆರಾಲ್ಡ್ ಪಿರೇರ, ಅಜೆಕಾರು ಚರ್ಚ್ ನೂತನ ಧರ್ಮಗುರು ವಂ.ಪ್ರದೀಪ್ ಕರ್ಡೋಜ, ಸ್ಥಳೀಯ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಷ್ಮಾ ಲೂವಿಸ್, ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ಲವಿನಾ ಫೆರ್ನಾಂಡಿಸ್, 20 ಆಯೋಗಗಳ ಸಂಯೋಜಕಿ ಶಾಂತಿ ಫೆರ್ನಾಂಡಿಸ್ ಮೊದಲಾದವರಿದ್ದರು.