ಕೃಷ್ಣ ಮಂತ್ರ ಜಪದಿಂದ ಕಷ್ಟ ದೂರ

ಲೋಕಬಂಧು ನ್ಯೂಸ್ | ಉಡುಪಿ, ಮೇ 10
ಕಲಿಯುಗದಲ್ಲಿ ಬಾಧಿಸುತ್ತಿರುವ ಎಲ್ಲಾ ಕಷ್ಟ- ನಷ್ಟಗಳಿಗೆ ಕೃಷ್ಣಮಂತ್ರ. ಜಪವೊಂದೇ ಪರಿಹಾರ ಎಂದು ಬೆಂಗಳೂರು ಇಸ್ಕಾನ್ ಉಪಾಧ್ಯಕ್ಷ ಚಂಚಲಪತಿದಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪರ್ಯಾಯ ಶೀರೂರು ಮಠ ಆಶ್ರಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಳ್ಳಲಾದ ಶ್ರೀಕೃಷ್ಣ ಮಂತ್ರಜಪ ಲೇಖನ ಯಜ್ಞಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.


'ನರಜನ್ಮ ಬಂದಾಗ ನಾಲಿಗೆ ಇದ್ದಾಗ ಕೃಷ್ಣಾ ಎನಬಾರದೇ' ಎಂದು ದಾಸವರೇಣ್ಯರು ಪ್ರಶ್ನಿಸಿದ್ದಾರೆ. ಇಸ್ಕಾನ್ ಸಂಸ್ಥಾಪಕ ಚೈತನ್ಯ ಮಹಾಪ್ರಭುಗಳೂ ಕಾಲ್ನಡಿಗೆ ಮೂಲಕ ದೇಶ ಪರ್ಯಟನೆ ನಡೆಸಿ ಕೃಷ್ಣ ಮಂತ್ರಜಪವನ್ನು ಜನತೆಗೆ ಬೋಧಿಸುವ ಮೂಲಕ ಜನಸಾಮಾನ್ಯರಲ್ಲಿ ಕೃಷ್ಣಪ್ರಜ್ಞೆ ಮೂಡಿಸಿದ್ದಾರೆ. ಈ ನಿಟ್ಟಿನಲ್ಲಿ ಪರ್ಯಾಯ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ಭಕ್ತರಿಂದ ಕೃಷ್ಣಮಂತ್ರ ಜಪ ಬರೆಸುವ ಮಹತ್ಕಾರ್ಯ ಹಮ್ಮಿಕೊಂಡಿರುವುದು ಯುಕ್ತವೂ ಸೂಕ್ತವೂ ಪ್ರಶಂಸನೀಯವೂ ಆಗಿದೆ ಎಂದರು.
ಓಂ ಶ್ರೀಕೃಷ್ಣಾಯ ನಮಃ ಎಂಬ ಕೃಷ್ಣ ಮಂತ್ರೋಪದೇಶ ನೀಡಿ, ಯೋಜನೆಯ ವೆಬ್‌ಸೈಟ್ ಬಿಡುಗಡೆ ಮಾಡಿದ ಪರ್ಯಾಯ ಮಠಾಧೀಶ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು, ಕಲಿಯುಗದಲ್ಲಿ ಕೃಷ್ಣ ಮಂತ್ರಕ್ಕೆ ವಿಶೇಷತೆ ಇದೆ. ಅದನ್ನು ಜಪಿಸುವ ಜೊತೆಗೆ ಬರೆಯುವುದರಿಂದ ಮತ್ತಷ್ಟು ಪುಣ್ಯಸಂಚಯ ಸಾಧ್ಯ.


ಇಂದಿನ ತಾಂತ್ರಿಕ ಯುಗದಲ್ಲಿ ಬರವಣಿಗೆಯೇ ಮರೆತುಹೋಗುತ್ತಿರುವ ಈ ದಿನಗಳಲ್ಲಿ ಕೃಷ್ಣ ಮಂತ್ರ ಜಪ ಲೇಖನದ ಜೊತೆಗೆ ತಮ್ಮಲ್ಲಿರುವ ಯಾವುದಾದರೊಂದು ಅವಗುಣಗಳನ್ನು ತ್ಯಜಿಸುವ ಸಂಕಲ್ಪ ಮಾಡಿಸುವ ಮೂಲಕ ಸತ್ಸಮಾಜ ನಿರ್ಮಾಣ ಯೋಜನೆಯ ಆಶಯ ಎಂದರು.


100 ಕೋಟಿ ಲೇಖನ ಸಂಕಲ್ಪ
ಲೋಕ ಕಲ್ಯಾಣಾರ್ಥವಾಗಿ ತಮ್ಮ ದ್ವೈವಾರ್ಷಿಕ ಪರ್ಯಾಯಾವಧಿಯಲ್ಲಿ 100 ಕೋಟಿ ಕೃಷ್ಣ ಮಂತ್ರ ಜಪಲೇಖನ ಸಂಕಲ್ಪಿಸಲಾಗಿದೆ ಎಂದು ಪರ್ಯಾಯ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ತಿಳಿಸಿದರು.


ವಿದ್ವಾಂಸ ಅದ್ಯಪಾಡಿ ಹರಿದಾಸ ಭಟ್ ಕೃಷ್ಣ ಮಂತ್ರದ ಮಹತ್ವ ವಿವರಿಸಿದರು.


ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ ಮತ್ತು ಶಾಸಕ ಯಶಪಾಲ್ ಸುವರ್ಣ ಶುಭ ಹಾರೈಸಿದರು.


ಮಠದ ದಿವಾನ ಡಾ.ಉದಯ ಕುಮಾರ್ ಸರಳತ್ತಾಯ ಸ್ವಾಗತಿಸಿ, ಯೋಜನೆಯ ಬಗ್ಗೆ ವಿವರಿಸಿದರು. ಲೇಖನಕ್ಕಾಗಿ ಶ್ರೀಮಠದ ವತಿಯಿಂದಲೇ ಪುಸ್ತಕ ವಿತರಿಸಲಾಗುತ್ತಿದ್ದು, ಅದಕ್ಕಾಗಿ 100 ರೂ. ನಿಗದಿಪಡಿಸಲಾಗಿದ್ದರೂ ಅದು ಕಡ್ಡಾಯವಲ್ಲ. ಪ್ರತೀ ತಿಂಗಳು ಅಷ್ಟಮಿಯಂದು ನಡೆಯುವ ಕೃಷ್ಣಮಂತ್ರ ಹೋಮದಂದು ಶ್ರೀಕೃಷ್ಣ ಸನ್ನಿಧಿಗೆ ಆಗಮಿಸಿ, ಲೇಖನ ಪುಸ್ತಕವನ್ನು ಶ್ರೀಪಾದರ ಮೂಲಕ ಕೃಷ್ಣನಿಗೆ ಸಮರ್ಪಿಸಲು ಆಶಿಸಲಾಗಿದೆ ಎಂದರು.


ವಿದ್ವಾಂಸ ಆನಂದತೀರ್ಥ ಆಚಾರ್ಯ ಸ್ವಾಗತಿಸಿ, ನಿರೂಪಿಸಿದರು.