ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಪೋಷಕರ ಪಾತ್ರ ಹಿರಿದು

ಲೋಕಬಂಧು ನ್ಯೂಸ್ | ಉಡುಪಿ, ಮೇ 8
ಭಾವಿ ಪ್ರಜೆಗಳಾಗಲಿರುವ ಇಂದಿನ ಮಕ್ಕಳ ಸೂಕ್ತ ವ್ಯಕ್ತಿತ್ವ ನಿರ್ಮಾಣ ಹೆತ್ತವರು ಹಾಗೂ ಪೋಷಕರ ಕರ್ತವ್ಯ ಎಂದು ಗುಂಡಿಬೈಲು ಶ್ರೀ ಆಭಿರಾಮ ಧಾಮ ಸಂಕೀರ್ತನ ಮಂದಿರದ ಸ್ಥಾಪಕಾಧ್ಯಕ್ಷ ಪೆರ್ಲತ್ತಾಯ ಡಾ.ಸುದರ್ಶನ ಭಾರತೀಯ ಹೇಳಿದರು.
ಅಭಿರಾಮ ಧಾಮ ಸಂಕೀರ್ತನ‌ ಮಂದಿರದಲ್ಲಿ ನಡೆದ 18 ದಿನಗಳವಧಿಯ ವಸಂತ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಮಕ್ಕಳಿಗೆ ಎಳೆವರೆಯದಲ್ಲಿ ಸಮಂಜಸವಾದ  ಸನ್ಮಾರ್ಗ, ಸತ್ಸಂಗ, ಸದ್ವಿಚಾರ, ಸೂಕ್ತ ಮಾರ್ಗದರ್ಶನ ಇತ್ಯಾದಿ ನೀಡದೇ ಹೋದಲ್ಲಿ ಪೋಷಕರು ಮಾತ್ರವಲ್ಲದೆ ಸಮಾಜ, ಗುರುಪೀಠಗಳು ಹಾಗೂ ಸಮುದಾಯದ ಹಿರಿಯರು ನಾಳೆಗಳಿಗೆ ಹೊಣೆಯಾಗಬೇಕಾಗುತ್ತದೆ.


ಈ ನಿಟ್ಟಿನಲ್ಲಿ ವಸಂತ ಶಿಬಿರಗಳು ಮಹತ್ತರ ಪಾತ್ರ ಹಾಗೂ ಪ್ರಭಾವ ಬೀರುವಲ್ಲಿ ಯಶಸ್ವಿಯಾಗುತ್ತವೆ. ಅಭಿರಾಮ ಧಾಮದಲ್ಲಿ ನಡೆದ ವಸಂತ ಶಿಬಿರ ಪರಿಣಾಮಕಾರಿಯಾಗಿ ನಡೆದಿದೆ ಎಂದರು.


ಶಿಬಿರದಲ್ಲಿ ವಿದ್ವಾನ್ ರಾಮಕೃಷ್ಣ ಶಾಸ್ತ್ರಿ ಸನಾತನ ಹಿಂದೂ ಧಾರ್ಮಿಕ ಸಂಸ್ಕಾರಗಳ ಮಾಹಿತಿ ನೀಡಿದ್ದು, ಇತರ 14 ಮಂದಿ ವಿವಿಧ ಸಂಪನ್ಮೂಲವ್ಯಕ್ತಿಗಳು ಸಂಗೀತ, ನೃತ್ಯ, ಯಕ್ಷಗಾನ, ವೇದ-ಗಣಿತ, ಶ್ರೀಮದ್ಭಗವದ್ಗೀತೆ, ವಾಲ್ಮೀಕಿ ರಾಮಾಯಣ, ಗಮಕ ಕಲೆ, ರಂಗಭೂಮಿ, ರಂಗೋಲಿ, ಪುಷ್ಪಮಾಲಿಕೆ, ಕಸದಿಂದ ರಸ, ದೇಶಭಕ್ತಿ ಗೀತೆ ಕಲಿಕೆ ಮಾತ್ರವಲ್ಲದೆ ಯೋಗ, ಪ್ರಾಣಾಯಾಮ, ಭಜನೆ, ಕವಿತೆ ರಚನೆ, ಮಾತೃಪೂಜನ, ಭಾರತಮಾತಾ ಪೂಜನ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಹಲವು ಮಜಲುಗಳಲ್ಲಿ ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಶ್ರಮಿಸಲಾಯಿತು.


ಏಪ್ರಿಲ್‌ 12ರಿಂದ 30ರ ವರೆಗೆ ನಡೆದ ಶಿಬಿರದಲ್ಲಿ 44 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.


ಯಕ್ಷಗಾನ ಗುರು ನವೀನ್‌ ಕೋಟ ಭಾಗವತಿಕೆಯಲ್ಲಿ 'ಶ್ರೀರಾಮ ಕಾರುಣ್ಯ' ಯಕ್ಷಗಾನ, ಸಂಸೃತ ಭಾರತೀ ಶಿಕ್ಷಣ ಪ್ರಮುಖರಾದ ವಿದ್ವಾನ್ ಶ್ಯಮಂತ್‌ ಭಾಗವತ್‌- ಅಕ್ಷಯಾ ದಂಪತಿಯಿಂದ ಸಂಸ್ಕೃತ ಸಂಭಾಷಣೆ ಹಾಗೂ 'ಪ್ರಹ್ಲಾದ ಚರಿತ' ನಾಟಕವನ್ನು ಮಕ್ಕಳು ಸಮರ್ಥವಾಗಿ ಪ್ರದರ್ಶಿಸಿದರು.


ಗಾಯಕ ಮಧೂರು ನಾರಾಯಣ ಸರಳಾಯ ಅವರಿಂದ ದಾಸವಾಣಿ ಕಛೇರಿ ಶಿಬಿರಾರ್ಥಿಗಳಿಗೆ ಸಂಗೀತದ ಅರಿವು ಮೂಡಿಸಿದ್ದರೆ, ಖ್ಯಾತ ಪ್ರವಚನಕಾರ ವಿದ್ವಾನ್ ಕೃಷ್ಣರಾಜ ಕುತ್ಪಾಡಿ 'ಭಾರತ ದರ್ಶನ'ದ ಮೂಲಕ ಮಕ್ಕಳಿಗೆ ನಮ್ಮ ದೇಶದ ಸಮಗ್ರ ಪರಿಚಯ ಮಾಡಿಕೊಟ್ಟರು.


ಬಂಟ್ವಾಳದ  ಗಮಕ ಕಲಾವಿದರಿಂದ ಸೀತಾ ಸ್ವಯಂವರ, ಕ್ಷೇತ್ರ ದರ್ಶನ ಪ್ರಯುಕ್ತ ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ದೇವಾಲಯ ಭೇಟಿ, ಎಲ್ಲಾ ಮಕ್ಕಳಿಗೆ ಶ್ರೀಸರಸ್ವತೀ ವಿದ್ಯಾಮಂತ್ರ ದೀಕ್ಷೆ ಇತ್ಯಾದಿ ನಡೆಸಲಾಗಿದ್ದು ಪೋಷಕರ ಪ್ರಶಂಸೆಗೆ ಪಾತ್ರವಾಯಿತು.


ಶಿಬಿರ ಆಯೋಜಕರಾದ ಸ್ವರಸಾಮ್ರಾಟ್ ವಿದ್ವಾನ್‌ ಅಭಿರಾಮ್‌ ಭರತವಂಶಿ ಸಾಂಸ್ಕೃತಿಕ ಪ್ರತಿಷ್ಠಾನ ಕಾರ್ಯದರ್ಶಿ, ನಾಟ್ಯ ವಿದುಷಿ ಸುಷ್ಮಾ ಸುದರ್ಶನ್‌ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.