ಮೂಡುಬಿದಿರೆಯಲ್ಲಿ ಹಲಸು ಮೇಳ

ಲೋಕಬಂಧು ನ್ಯೂಸ್ ಮೂಡುಬಿದಿರೆ, ಮೇ 9
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಪವರ್ ಫ್ರೆಂಡ್ಸ್ ಬೆದ್ರ, ವಂಶಿ ಈವೆಂಟ್ಸ್, ಬೆನಕ ಈವೆಂಟ್ಸ್ ಹಾಗೂ ಮೂಡುಬಿದಿರೆ ಜೆಸಿಐ ತ್ರಿಭುವನ್ ಸಂಯುಕ್ತ ಆಶ್ರಯದಲ್ಲಿ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಆಯೋಜಿಸಲಾದ ಮೂರು ದಿನಗಳ ಬೃಹತ್ ಹಲಸು ಮೇಳಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.ಡ
ಉದ್ಯಮಿ ಕೆ. ಶ್ರೀಪತಿ ಭಟ್ ಮೇಳ ಉದ್ಘಾಟಿಸಿ, ಬಡವರ ಆಹಾರ ಎಂದೇ ಕರೆಸಿಕೊಂಡಿದ್ದ ಹಲಸು ಇಂದು ಹಲವಾರು ಪ್ರಯೋಗಗಳ ಮೂಲಕ ವಿವಿಧ ಖಾದ್ಯಗಳಾಗಿ ಮಾರ್ಪಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಈ ಮೇಳದಲ್ಲಿ ಕೇವಲ ಹಲಸು ಮಾತ್ರವಲ್ಲದೆ ಮಾವು, ಗೇರು ಹಾಗೂ  ಗೃಹ ಉತ್ಪನ್ನಗಳಿಗೆ ಮೌಲ್ಯವರ್ಧನೆಯಾಗುತ್ತಿದೆ ಎಂದರು.


ವಂಶಿ ಈವೆಂಟ್ಸ್ ಮಾಲಕಿ ರಮಿತಾ ಸೂರ್ಯವಂಶಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸಲಾಗಿರುವ ಹಲಸು ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಹಲಸಿನ ವೈವಿಧ್ಯಮಯ ಖಾದ್ಯಗಳು ಮೇಳದ ಪ್ರಮುಖ ಆಕರ್ಷಣೆಯಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಮಾರಾಟಗಾರರು ವಿಶೇಷ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ನಡೆಸುತ್ತಿದ್ದಾರೆ ಎಂದರು.


ಲಯನ್ಸ್ ಅಧ್ಯಕ್ಷ ಶಿವ ಪ್ರಸಾದ್ ಹೆಗ್ಡೆ, ಪುತ್ತಿಗೆ ಫ್ರೆಂಡ್ಸ್ ಅಧ್ಯಕ್ಷ ಮುರಳೀಧರ ಕೋಟ್ಯಾನ್, ಪ್ರೆಸ್ ಕ್ಲಬ್ ಅಧ್ಯಕ್ಷ ಬೆಳುವಾಯಿ ಸೀತಾರಾಮ ಆಚಾರ್ಯ, ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ಹರೀಶ್ ಎಂ.ಕೆ., ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಶ್ವೇತಾ ಜೈನ್, ಬಂಟರ ಸಂಘ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್. ಹೆಗ್ಡೆ, ಬೆನಕ ಈವೆಂಟ್ಸ್ ಮಾಲಕ ಗಣೇಶ ಬಾರ್ಕೂರು, ಮೂಡುಬಿದಿರೆ ಜೆಸಿಐ ತ್ರಿಭುವನ್ ಅಧ್ಯಕ್ಷ ಸುಧಾಕರ ಶೆಟ್ಟಿ,  ಪವರ್ ಫ್ರೆಂಡ್ಸ್ ಅಧ್ಯಕ್ಷ ವಿನಯ್, ನಮೋ ಫ್ರೆಂಡ್ಸ್ ನೆತ್ತೋಡಿಯ ಕಿರಣ್ ಸುವರ್ಣ, ನೆತ್ತೋಡಿ ಹೊಸ ಕನಸು ಟ್ರಸ್ಟ್ ಅಧ್ಯಕ್ಷ ಸಂಪತ್ ಕುಮಾರ್, ಪ್ರಮುಖರಾದ ರಾಜಾರಾಮ್ ನಾಗರಕಟ್ಟೆ, ಕುಮಾರ್ ಇರುವೈಲ್, ಜಯಪ್ರಕಾಶ್ ಭಂಡಾರಿ ಉಪಸ್ಥಿತರಿದ್ದರು.


ಶ್ರೀನಾಥ್ ಶೆಟ್ಟಿ ನಿರೂಪಿಸಿದರು.