ಲೋಕಬಂಧು ನ್ಯೂಸ್ ಉಡುಪಿ, ಮೇ 12
ಸಾಮಾಜಿಕ ಭದ್ರತೆ ಒದಗಿಸುವ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗಳು ಪ್ರತಿಯೊಂದು ಕುಟುಂಬಗಳಿಗೆ ಕನಿಷ್ಟ ವೆಚ್ಚದಲ್ಲಿ ಆರ್ಥಿಕ ಭದ್ರತೆ ಒದಗಿಸುತ್ತವೆ. ಅವುಗಳನ್ನು ಪ್ರತಿಯೊಬ್ಬರೂ ಹೊಂದುವಂತೆ ನೋಡಿಕೊಳ್ಳಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ ಕಾರ್ಯದರ್ಶಿ ಡಾ.ವಿಶಾಲ್ ಆರ್. ಸೂಚಿಸಿದರು.ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೀವನದ ಅನಿಶ್ಚಿತತೆಯ ವಿರುದ್ಧ ರಕ್ಷಣೆಗಾಗಿಯೇ ಈ ಯೋಜನೆಗಳನ್ನು ಸರಕಾರ ಜಾರಿಗೆ ತಂದಿದೆ. ಅವು ಸಾಮಾಜಿಕ, ಆರ್ಥಿಕ ಸ್ಥಿತಿಯ ಅಡೆತಡೆಗಳನ್ನು ಮೀರಿ ಜೀವನದ ಎಲ್ಲಾ ಹಂತಗಳಲ್ಲಿ ವ್ಯಕ್ತಿಗಳಿಗೆ ಸುರಕ್ಷತಾ ಜಾಲ ವಿಸ್ತರಿಸುತ್ತದೆ. ಸಣ್ಣ ವಿಮಾ ಮೊತ್ತ ಪಾವತಿಸುವುದರೊಂದಿಗೆ ಈ ಯೋಜನೆಗಳ ಮೂಲಕ ತ್ವರಿತವಾಗಿ ಸುರಕ್ಷೆ ಪಡೆಯಬಹುದು. ಅನಿರೀಕ್ಷಿತ ಅಪಘಾತಗಳು ಮತ್ತು ಅಂಗವೈಕಲ್ಯಗಳ ವಿರುದ್ಧ ಆರ್ಥಿಕ ರಕ್ಷಣೆ ಒದಗಿಸುತ್ತದೆ ಎಂದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಹಾಗೂ ಸರಕಾರಿ ನೌಕರರು ಕಡ್ಡಾಯವಾಗಿ ಈ ಯೋಜನೆಗಳ ನೋಂದಣಿ ಮಾಡಿಸಿಕೊಳ್ಳಬೇಕು. ಒಂದೊಮ್ಮೆ ಅಪಘಾತದಲ್ಲಿ ಮರಣ ಸಂಭವಿಸಿದ್ದಲ್ಲಿ 40 ಲಕ್ಷಕ್ಕೂ ಹೆಚ್ಚು ಹಣ ತಮ್ಮ ಕುಟುಂಬದವರಿಗೆ ದೊರೆಯುತ್ತದೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರೂ ಈ ಯೋಜನೆ ವ್ಯಾಪ್ತಿಗೆ ಬರುವಂತೆ ನೋಡಿಕೊಳ್ಳಬೇಕು. ಜಿಲ್ಲಾ ಅಗ್ರಗಣ್ಯ ಬ್ಯಾಂಕ್‌ನ ವ್ಯವಸ್ಥಾಪಕರು ಈ ಬಗ್ಗೆ ಗಮನಹರಿಸಬೇಕು ಎಂದು ಸೂಚನೆ ನೀಡಿದರು.
ಪ್ರವಾಸೋದ್ಯಮದಿಂದ ಸ್ಥಳೀಯರಿಗೆ ಹೆಚ್ಚು ಉದ್ಯೋಗಾವಕಾಶಗಳನ್ನು ಸುಲಭವಾಗಿ ದೊರಕುತ್ತದೆ. ಕಡಲ ಕಿನಾರೆಗಳು, ಧಾರ್ಮಿಕ ಕೇಂದ್ರಗಳು, ನೈಸರ್ಗಿಕ ತಾಣಗಳು ಜನರನ್ನು ಹೆಚ್ಚು ಆಕರ್ಷಿಸುತ್ತವೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತುನೀಡಬೇಕು ಎಂದರು.
ಧಾರ್ಮಿಕ ಕೇಂದ್ರಗಳಿಗೆ ಆಗಮಿಸುವ ಭಕ್ತರಿಗೆ ದೇವರ ದರ್ಶನ ಹಾಗೂ ಪ್ರಸಾದದ ವ್ಯವಸ್ಥೆ ವ್ಯವಸ್ಥಿತವಾಗಿ ಲಭಿಸುವಂತೆ ನೋಡುವ ಜೊತೆಗೆ ಅವರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದ ಅವರು, ದೇವಸ್ಥಾನಗಳ ಅನುದಾನಗಳನ್ನು ಸಮರ್ಪಕವಾಗಿ ಬಳಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು ಎಂದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕೇಂದ್ರ ಭಾಗದಲ್ಲಿರುವ ಸ್ಥಳವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಅಭಿವೃದ್ಧಿಪಡಿಸಬೇಕು. ಅಲ್ಲಿಗೆ ಬರುವ ವಾಹನಗಳ ನಿಲುಗಡೆಗೆ ಅನುಕೂಲವಾಗಲು ವರ್ಟಿಕಲ್ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು.
ಕುಡಿಯುವ ನೀರು ಒದಗಿಸುವ ಜಲ್ ಜೀವನ್ ಮಿಷನ್ ಯೋಜನೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆದ ಅವರು, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಬಾಕಿ ಉಳಿದಿರುವ ವಾರಾಹಿ ಯೋಜನೆಯ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಲು ತಿಳಿಸಿದರು.
ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಅನೇಕ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಅವು ಪ್ರತಿಯೊಬ್ಬರಿಗೂ ತಲುಪಬೇಕು. ಜಿಲ್ಲೆಯಲ್ಲಿ ವಿಶೇಷವಾಗಿ ಕೊರಗ ಸಮುದಾಯದವರಿಗೆ ಆರೋಗ್ಯ ಸೇವೆಗಳ ಲಾಭ ಪಡೆಯುವಂತೆ ಆಶಾ ಹಾಗೂ ಆರೋಗ್ಯ ಸಿಬ್ಬಂದಿಗಳು ನೋಡಿಕೊಳ್ಳಬೇಕು ಎಂದರು.
ಕೊಚ್ಚಿನ್ ಶಿಪ್ ಯಾರ್ಡ್ ಕಾರ್ಯವ್ಯಾಪ್ತಿ ಹೆಚ್ಚಿಸಲು ಅಗತ್ಯ ಸೌಕರ್ಯ ಕಲ್ಪಿಸಬೇಕು. ಅಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಲಭಿಸುವಂತೆ ನೋಡಿಕೊಳ್ಳಬೇಕು. ಅದಕ್ಕೆ ಪೂರಕವಾಗಿ ಐ.ಟಿ.ಐ.ನಲ್ಲಿ ವೃತ್ತಿ ತರಬೇತಿ ಕಲ್ಪಿಸಬೇಕು ಎಂದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಎಎಸ್ಪಿ ಸುಧಾಕರ ನಾಯಕ್, ಸಹಾಯಕ ಕಮೀಷನರ್ ರಶ್ಮಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಮೊದಲಾದವರು ಸಭೆಯಲ್ಲಿದ್ದರು.