ಲೋಕಬಂಧು ನ್ಯೂಸ್ ನವದೆಹಲಿ, ಮೇ 11
ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಫಲಿತಾಂಶ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದ್ದು, ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಶೃಂಗೇರಿ ಕ್ಷೇತ್ರದ ಶಾಸಕರಾಗಿ ಮುಂದುವರಿಯುವಂತೆ ಸೂಚಿಸುವ ಮೂಲಕ ಬಿಜೆಪಿಯ ಡಿ.ಎನ್.ಜೀವರಾಜ್ ಅವರಿಗೆ ಸುಪ್ರೀಂ ಶಾಕ್ ನೀಡಿದೆ!ಅಂದು ಸಿಂಧುವಾಗಿದ್ದ ಮತಗಳು ಮರು ಎಣಿಕೆ ಸಂದರ್ಭದಲ್ಲಿ ಅಸಿಂಧು ಆಗಿರುವುದು ಹೇಗೆ? ಮತಗಳನ್ನು ತಿದ್ದಲಾಗಿದೆಯೇ ಎಂದು ಆರೋಪಿಸಿ ರಾಜೇಗೌಡ ಸುಪ್ರೀಂ ಮೊರೆ ಹೋಗಿದ್ದರು. ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದೆ.
ಸುಪ್ರೀಂ ಕೋರ್ಟ್ ಸೂಚನೆಯಿಂದಾಗಿ ಸದ್ಯಕ್ಕೆ ಟಿ.ಡಿ. ರಾಜೇಗೌಡ ಶಾಸಕರಾಗಿ ಮುಂದುವರಿಯಲಿದ್ದು, ಪ್ರಮಾಣ ವಚನ ಸ್ವೀಕರಿಸಿದ ಕೇವಲ ಒಂದೇ ವಾರದಲ್ಲಿ ಜೀವರಾಜ್ ಮಾಜಿ ಆಗಲಿದ್ದಾರೆ!
ಪ್ರಕರಣದ ಮುಂದಿನ ವಿಚಾರಣೆ ಮೇ 27ರಂದು ನಡೆಯಲಿದ್ದು, ಅಲ್ಲಿಯ ವರೆಗೆ ಮತ್ತಷ್ಟು ಕುತೂಹಲ ಮುಂದುವರಿಯಲಿದೆ.