ಲೋಕಬಂಧು ನ್ಯೂಸ್ ಉಡುಪಿ, ಮೇ 11
ಸಮಾಜದ ಅಭಿವೃದ್ಧಿಗಾಗಿ ತೊಡಗಿಸಿಕೊಂಡ ಪ್ರತಿಯೊಬ್ಬ ಸಂತರು, ಶರಣರು ಹಾಗೂ ಮಹಾನ್ ವ್ಯಕ್ತಿಗಳು ಸಮಾಜದ ಆಸ್ತಿ. ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಅವುಗಳನ್ನು ಮುಂದಿನ ಪೀಳಿಗೆಗೆ ಪಸರಿಸುವ ಕೆಲಸವಾಗಬೇಕು ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು.ಜಿಲ್ಲಾಕಾರಿ ಕಚೇರಿ ಕೋರ್ಟ್ ಹಾಲ್‌ನಲ್ಲಿ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಸೋಮವಾರ ನಡೆದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ವಚನಗಳ ಸಾರ, ಭಕ್ತಿ, ನಿಷ್ಠೆ ಮತ್ತು ಧಾರ್ಮಿಕ ಭಾವನೆಯನ್ನು ಪ್ರತಿಯೊಬ್ಬರೂ ಅರಿತುಕೊಳ್ಳುವುದು ಅಗತ್ಯ ಎಂದರು.
ವಿಶೇಷ ಉಪನ್ಯಾಸ ನೀಡಿದ ಡಾ.ನಿರಂಜನ ಯು.ಸಿ. ಅವರು ಶ್ರೀಶೈಲ ಮಲ್ಲಿಕಾರ್ಜುನನ ಭಕ್ತೆಯಾದ ಹೇಮರೆಡ್ಡಿ ಮಲ್ಲಮ್ಮ ಮಾನಸಿಕ ಶಿವಲಿಂಗ ದೀಕ್ಷೆ ತೊಟ್ಟು ಸಮಾಜ, ನಾಡು, ನುಡಿ ಹಾಗೂ ಮನುಕುಲದ ಉದ್ಧಾರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ದೇವರು ಮತ್ತು ಭಕ್ತನ ಸಂಬಂಧ ತಿಳಿಯಬೇಕಾದರೆ ಶರಣ ಸಾಹಿತ್ಯ ಓದಬೇಕು. ಶರಣ ಸಾಹಿತ್ಯ, ಸಂಸ್ಕೃತಿ ಕನ್ನಡದ ಶ್ರೀಮಂತ ಭಾಗ. ತ್ರಿಪದಿ ಕವಿ ಸರ್ವಜ್ಞನಂತೆ ತೆಲುಗಿನ ಮೇರುಕವಿ ವೇಮನನನ್ನು ಸರಿದಾರಿಗೆ ತಂದು ತೆಲುಗು ಸಾಹಿತ್ಯ ರಚನೆಯ ಯೋಗಿಯಾಗಿ ಮಾಡಿದ ಕೀರ್ತಿ ಹೇಮರೆಡ್ಡಿ ಮಲ್ಲಮ್ಮ ಅವರದ್ದು. ಹೇಮರೆಡ್ಡಿ ಮಲ್ಲಮ್ಮ ಓರ್ವ ಆದರ್ಶ ಮಹಿಳೆ, ಸ್ತ್ರೀಶಕ್ತಿ. ಅವರ ವಿಚಾರಧಾರೆಗಳು ಮನೆಮಾತಾಗಬೇಕು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಡಾ. ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ಮೊದಲಾದವರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ನಿರೂಪಿಸಿದರು. ಶಾಂತನಗೌಡ ವಂದಿಸಿದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಸಚಿವ ಡಿ.ಸುಧಾಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.