ಲೋಕಬಂಧು ನ್ಯೂಸ್ | ಹೈದರಾಬಾದ್, ಮೇ 11
ಮಧ್ಯಪ್ರಾಚ್ಯ ಯುದ್ಧದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಭೀತಿ ಉಂಟಾಗಿರುವ ನಡುವೆಯೇ ಎಚ್ಚರಿಕೆಯ ನುಡಿಗಳನ್ನಾಡಿರುವ ಪ್ರಧಾನಿ ನರೇಂದ್ರ ಮೋದಿ, ಅಂತಾರಾಷ್ಟ್ರೀಯ ಸಂಘರ್ಷಗಳಿಂದ ಆಗುತ್ತಿರುವ ಬೆಲೆ ಏರಿಕೆ ಎದುರಿಸಲು ಸರ್ವರ ಸಾಮೂಹಿಕ ಸಹಭಾಗಿತ್ವ ಅಗತ್ಯವಾಗಿದೆ ಎಂದು ಹೇಳಿದ್ದಾರೆ. ಆ ಮೂಲಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸನ್ನಿಹಿತ ಎಂಬ ಪರೋಕ್ಷ ಸಂದೇಶ ರವಾನಿಸಿದ್ದಾರೆ.
ಅಲ್ಲದೆ, ಈ ಬೆಲೆ ಏರಿಕೆಯ ಆಘಾತ ಎದುರಿಸಲು ಮಿತವ್ಯಯ ಮಂತ್ರ ಪಠಿಸಿರುವ ಅವರು, ಕೊರೋನಾ ಕಾಲದಂತೆ ಜನರು ಮನೆಯಿಂದ ಕೆಲಸ ಮಾಡುವ (ವರ್ಕ್ ಫ್ರಂ ಹೋಮ್) ಪದ್ದತಿಗಳನ್ನು ಪುನರುಜ್ಜೀವನಗೊಳಿಸಬೇಕು. ಇಂಧನ ಬಳಕೆ ಕಡಿತಗೊಳಿಸಬೇಕು ಮತ್ತು ದೇಶದ ವಿದೇಶಿ ವಿನಿಮಯ ಉಳಿತಾಯ ಆಗುವಂತೆ ಮಾಡಲು ಒಂದು ವರ್ಷದ ವರೆಗೆ ಮದುವೆ/ ಸಮಾರಂಭಗಳಿಗೆ ಚಿನ್ನ ಖರೀದಿಸುವುದನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ.
ಜಾಗತಿಕ ಕಚ್ಚಾತೈಲ ಬೆಲೆಗಳು ಬ್ಯಾರೆಲ್'ಗೆ ಸುಮಾರು 70 ಡಾಲರ್'ಗಳಿಂದ ಸುಮಾರು 126 ಡಾಲರ್'ಗೆ ಏರಿದ್ದು ಮೇ 15ರೊಳಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸನ್ನಿಹಿತವಾಗಿದೆ ಎನ್ನಲಾಗಿದೆ.
ಮೋದಿ ಅಷ್ಟ ಸಂದೇಶ
1. ಕೊರೋನಾ ಸಂದರ್ಭದಂತೆ ರೀತಿ ವರ್ಕ್ ಫ್ರಂ ಹೋಮ್ ಮರು ಜಾರಿ ಮಾಡಿ
2. ಆನ್ ಲೈನ್, ವರ್ಚುವಲ್ ಆಗಿ ಸಭೆಗಳನ್ನು ನಡೆಸಿ
3. ಸ್ವಂತ ವಾಹನ ಬಿಟ್ಟು ಬಸ್, ಮೆಟ್ರೋ ಬಳಸಿ
4. ಅನಗತ್ಯ ವಿದೇಶ ಪ್ರವಾಸ, ರಜೆ, ವಿದೇಶಿ ಮದುವೆ ಬಿಡಿ
5. ಒಂದು ವರ್ಷ ಅನಗತ್ಯ ಚಿನ್ನ ಖರೀದಿ ಮಾಡಬೇಡಿ
6. ರಸಗೊಬ್ಬರ ಬಳಕೆ 50 ಶೇ. ಇಳಿಸಿ, ಸಾವಯವ ಕೃಷಿ ಮಾಡಿ
7. ಕೃಷಿಗೆ ಡೀಸೆಲ್ ಬಿಟ್ಟು ಸೌರಶಕ್ತಿ ಪಂಪ್ ಸೆಟ್ ಬಳಸಿ
8. ಕೊರೊನಾ ಕಾಲದ ರೀತಿಯ ಮಿತವ್ಯಯ, ದಕ್ಷತೆ ನಮ್ಮ ಗುರಿಯಾಗಲಿ
