ಲೋಕಬಂಧು ನ್ಯೂಸ್ ಉಡುಪಿ, ಜು.22
ಉಡುಪಿಯ ಪ್ರಸಿದ್ಧ ಚಿನ್ನಾಭರಣ ಸಂಸ್ಥೆ `ಸ್ವರ್ಣ' ಸಂಸ್ಥಾಪಕ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಉಡುಪಿ ಶಾಖೆಯ ಮೊದಲ ಸದಸ್ಯ ಗುಜ್ಜಾಡಿ ನರಸಿಂಹ ನಾಯಕ್ ಅವರ ಜನ್ಮಶತಮಾನೋತ್ಸವ ಅಂಗವಾಗಿ ಜು.25ರಂದು ಗುಜ್ಜಾಡಿ ಅವರ ಜೀವನಗಾಥೆಯ `ಗುಜ್ಜಾಡಿಯವರ ನೆನಪುಗಳು' ಪುಸ್ತಕ ಅನಾವರಣ ನಡೆಯಲಿದೆ ಎಂದು ಖ್ಯಾತ ಲೆಕ್ಕಪರಿಶೋಧಕ ಗುಜ್ಜಾಡಿ ಪ್ರಭಾಕರ ನಾಯಕ್ ತಿಳಿಸಿದರು.ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗುಜ್ಜಾಡಿ ನರಸಿಂಹ ನಾಯಕ್ ಅವರ ಜೀವನ, ಮೌಲ್ಯಗಳು ಹಾಗೂ ಸೇವೆಯನ್ನು ಸ್ಮರಿಸಲು ಗುಜ್ಜಾಡಿ ಕುಟುಂಬದ ವತಿಯಿಂದ ಜು.25ರಂದು ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಬೆಳಿಗ್ಗೆ 10.30ರಿಂದ ನಡೆಯುವ ಕಾರ್ಯಕ್ರಮದಲ್ಲಿ ಆರ್.ಎಸ್. ಎಸ್. ಸಹಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಪುಸ್ತಕ ಅನಾವರಣಗೊಳಿಸುವರು.
ಬೆಂಗಳೂರಿನ ಲೆಕ್ಕಪರಿಶೋಧಕ ಉಲ್ಲಾಸ್ ಕಾಮತ್, ವಿಶ್ವ ಹಿಂದೂ ಪರಿಷತ್ನ ಎಂ.ಎನ್. ನಾಗರಾಜ್, ಎಓಜೆ ಸಂಪಾದಕ ಸುಮೇಶ್ ವಧೇರ ಅತಿಥಿಗಳಾಗಿ ಆಗಮಿಸುವರು. ಸತೀಶ ಮಲ್ಯ ಅವರು ಕೃತಿಯನ್ನು ಸಂಪಾದಿಸಿದ್ದಾರೆ ಎಂದು ವಿವರಿಸಿದರು.
1926ರಲ್ಲಿ ಬಡ ಕುಟುಂಬದಲ್ಲಿ ಜನಿಸಿದ ನರಸಿಂಹ ನಾಯಕ್, 1942ರಲ್ಲಿ ಉಡುಪಿಯಲ್ಲಿ ಆರಂಭಗೊಂಡ ಆರ್.ಎಸ್.ಎಸ್. ಶಾಖೆಗೆ ಸೇರ್ಪಡೆಗೊಂಡರು. 38 ವರ್ಷಗಳ ಕಾಲ ಉದ್ಯೋಗಿಯಾಗಿ ಅನ್ಯ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ, ತನ್ನದೇ ಪರಿಶ್ರಮದಿಂದ ಗುಜ್ಜಾಡಿ ಸ್ವರ್ಣ ಜ್ಯುವೆಲ್ಲರ್ಸ್ ಸಂಸ್ಥೆ ಸ್ಥಾಪಿಸಿ, ಅನೇಕರಿಗೆ ಉದ್ಯೋಗದಾತರಾದರು. ವಿಶ್ವ ಹಿಂದೂ ಪರಿಷತ್ ಮತ್ತು ಆರ್.ಎಸ್.ಎಸ್ ಸೇರಿ ಸಮಾಜಸೇವೆಯಲ್ಲಿ ತೊಡಗಿದರು. ಲಾಭ ಗಳಿಕೆಗಿಂತ ಜವಾಬ್ದಾರಿ ಮೊದಲು ಎಂಬ ಆಶಯದೊಂದಿಗೆ ನಡೆದವರು ಎಂದು ಪ್ರಭಾಕರ ನಾಯಕ್ ತಿಳಿಸಿದರು.
ಗುಜ್ಜಾಡಿ ರಘುವೀರ ನಾಯಕ್, ಗುಜ್ಜಾಡಿ ರಾಮದಾಸ ನಾಯಕ್, ಗುಜ್ಜಾಡಿ ದೀಪಕ್ ನಾಯಕ್ ಮತ್ತು ಗುಜ್ಜಾಡಿ ಅಜಯ್ ನಾಯಕ್ ಸುದ್ದಿಗೋಷ್ಟಿಯಲ್ಲಿದ್ದರು.