ಲೋಕಬಂಧು ನ್ಯೂಸ್ | ಉಡುಪಿ, ಜು.22
ಶೀರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ 8ನೇ ವರ್ಷದ ಆರಾಧನಾ ಮಹೋತ್ಸವ ಇಲ್ಲಿನ ರಥಬೀದಿಯ ಶ್ರೀ ರಾಘವೇಂದ್ರಸ್ವಾಮಿ ಸನ್ನಿಧಾನದಲ್ಲಿ ಶ್ರೀ ಲಕ್ಷ್ಮೀವರತೀರ್ಥರ ಪೂರ್ವಾಶ್ರಮದ ಕುಟುಂಬಿಕರಿಂದ ವೈಭವದಿಂದ ನಡೆಯಿತು.
ಪ್ರಾತಃಕಾಲದಲ್ಲಿ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಸಮ್ಮುಖದಲ್ಲಿ ಪ್ರಾರ್ಥನೆ, ಬಳಿಕ ಪವಮಾನ ಕಲಶಾಭಿಷೇಕ ಹೋಮ ಹಾಗೂ ವಿರಜಾ ಹೋಮ ನಟರಾಜ ಉಪಾಧ್ಯಾಯ ಹಾಗೂ ಅನಿಲ್ ನೇತೃತ್ವದಲ್ಲಿ ನಡೆಯಿತು.
ಬಳಿಕ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಮೃತ್ತಿಕಾ ವೃಂದಾವನಕ್ಕೆ ಪಂಚಾಮೃತಾಭಿಷೇಕ ಹಾಗೂ ವಿಶೇಷ ಪೂಜೆ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರ ಪಿ.ಲಾತವ್ಯ ಆಚಾರ್ಯ ನೆರವೇರಿಸಿದರು. ಅಪರಾಹ್ನ ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ರಾಯರ ಮಠದ ವ್ಯವಸ್ಥಾಪಕ ಜಯತೀರ್ಥ ಆಚಾರ್ಯ, ಅಪ್ಪಣ್ಣ ಆಚಾರ್ಯ, ಹರಿಕೃಷ್ಣ ಪುನರೂರು, ಲಕ್ಷ್ಮೀನಾರಾಯಣ ತಂತ್ರಿ, ಸೊಂಡೂರು ಪ್ರಹ್ಲಾದ ಆಚಾರ್ಯ, ಪಿ.ವಾದಿರಾಜ ಆಚಾರ್ಯ, ಪಿ.ಶ್ರೀನಿವಾಸ ಆಚಾರ್ಯ, ಪಿ.ವೃಜನಾಥ ಆಚಾರ್ಯ, ಗೋಪಾಲಕೃಷ್ಣ ಭಟ್ ವಳಕಾಡು, ಡಾ.ವ್ಯಾಸರಾಜ ತಂತ್ರಿ, ಚೆನ್ನೈನ ರಾಜಗೋಪಾಲ್, ರಾಜೇಂದ್ರ ಆಚಾರ್ಯ ಬಡಗುಬೆಟ್ಟು, ಅಕ್ಷೋಭ್ಯ ಆಚಾರ್ಯ, ಅರ್ಜುನ ಆಚಾರ್ಯ, ವಿಶಾಲ ಆಚಾರ್ಯ, ಶಂಕರನಾರಾಯಣ ಹೊಳ್ಳ ಕುಂದಾಪುರ, ಯಾದವ, ರಾಕೇಶ್ ಮೊದಲಾದವರು ಪಾಲ್ಗೊಂಡಿದ್ದರು.
ಕೇಮಾರು ಶ್ರೀ ಸಾಂದೀಪನಿ ಮಠದ ಆಶ್ರಮದಲ್ಲಿ ಶ್ರೀ ಈಶವಿಠಲದಾಸ ಸ್ವಾಮೀಜಿಯವರು ಶೀರೂರು ಶ್ರೀಪಾದರ ಆರಾಧನಾ ನಿಮಿತ್ತ ವಿಶೇಷ ಪೂಜೆ ಹಾಗೂ ಪುಷ್ಪಾರ್ಚನೆ ಆಯೋಜಿಸಿದ್ದರು.
