ಲೋಕಬಂಧು ನ್ಯೂಸ್ ನವದೆಹಲಿ, ಜು.21
ನೀಟ್ ಪ್ರಶ್ನೆಪತ್ರಿ ಸೋರಿಕೆ ಪ್ರಕರಣವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ಖಂಡಿಸಿ, ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಮಂಗಳವಾರ ಧರಣಿ ನಡೆಸಿದರು.ಇಲ್ಲಿನ 'ಲೋಕ ಕಲ್ಯಾಣ ಮಾರ್ಗ'ದಲ್ಲಿರುವ ಪ್ರಧಾನಿಯ ಅಧಿಕೃತ ನಿವಾಸದ ಎದುರು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್‌ನ ಹಲವು ಸಂಸದರು, ಹಿರಿಯ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದು, ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸಂಸತ್ ಚಲೊ ಪ್ರತಿಭಟನಾ ಮೆರವಣಿಗೆ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕರು, ಪ್ರಧಾನಿ ನಿವಾಸದತ್ತ ಪಾದಯಾತ್ರೆ ನಡೆಸಿ, ಧರಣಿ ನಡೆಸಿದರು.