ಶೀಘ್ರದಲ್ಲಿ ಭಾರತ್ ಪೆಟ್ರೋಲ್ ಬಂಕ್, ಇವಿ ಚಾರ್ಜಿಂಗ್

ಲೋಕಬಂಧು ನ್ಯೂಸ್ ಉಡುಪಿ, ಜು.21
ತೆಲಂಗಾಣದ ನಂತರ ರಾಜ್ಯದ ಉಡುಪಿ ಜಿಲ್ಲೆಯ 9 ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಭಾರತ್ ಪೆಟ್ರೋಲ್ ಬಂಕ್, ಇ.ವಿ. ಚಾರ್ಜಿಂಗ್ ಪಾಯಿಂಟ್ ಮತ್ತು ಭಾರತ್ ಕೆಫೆಗಳನ್ನು ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಭಾರತ್ ಪೆಟ್ರೋಲಿಯಂ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಆಯ್ದ ಗ್ರಾಮ ಪಂಚಾಯತ್'ಗಳಲ್ಲಿರುವ ಹೆದ್ದಾರಿಗೆ ಹೊಂದಿಕೊಂಡ ಪಂಚಾಯತ್ ನಿವೇಶನಗಳಲ್ಲಿ ಭಾರತ್ ಪೆಟ್ರೋಲಿಯಂ ಮೂಲಕ ಪೆಟ್ರೋಲ್ ಬಂಕ್'ಗಳು, ಇವಿ ಚಾರ್ಜಿಂಗ್ ಪಾಯಿಂಟ್ ಮತ್ತು ಭಾರತ್ ಕೆಫೆಗಳನ್ನು ನಿರ್ಮಿಸಲಾಗುವುದು ಎಂದು ವಿವರಿಸಿದರು.


ಪ್ರಥಮ ಹಂತದಲ್ಲಿ ಉಡುಪಿ ಜಿಲ್ಲೆಯ ಹೆಬ್ರಿಯ ಮುದ್ರಾಡಿ, ಬೆಳ್ವೆ ಮತ್ತು ಅಲ್ತಾಡಿ, ಕಾರ್ಕಳದ ಮುಡಾರು, ಬೆಳ್ಳಣ್ಣು, ಸಾಣೂರು, ಕುಕ್ಕುಂದೂರು ಮತ್ತು ಬೈಲೂರು, ಉಡುಪಿಯ ತೆಂಕನಿಡಿಯೂರು ಗ್ರಾಮ ಪಂಚಾಯತ್'ಗಳಲ್ಲಿ ನಿವೇಶನ ಗುರುತಿಸಿದ್ದು, ಸಂಸ್ಥೆಯ ಮಾನದಂಡದಡಿ ಆಯ್ಕೆ ಮಾಡಿ ಶಿಫಾರಸು ಮಾಡಲಾಗಿದೆ ಎಂದರು. ಜಿಲ್ಲೆಯ ಇತರ ತಾಲೂಕುಗಳಲ್ಲಿ ಸಮೀಕ್ಷೆ ನಡೆಯುತ್ತಿದ್ದು ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಪಂಚಾಯತ್ ಪೆಟ್ರೋಲ್ ಬಂಕ್ ತೆರೆಯಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.


ಭಾರತ್ ಪೆಟ್ರೋಲಿಯಂನ ಟೆರಿಟರಿ ಮ್ಯಾನೇಜರ್ ವಿಪಿನ್ ದಾಸ್ ವಂಶ್ವಾಲ್, ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಜೇಮ್ಸ್ ಡಿ'ಸಿಲ್ವಾ, ಕಾರ್ಕಳ ತಾಲೂಕು ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಎಂ.ಎನ್., ಉಡುಪಿ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ವಿಜಯ, ಹೆಬ್ರಿ ತಾಲ್ಲೂಕು ಉಪತಹಶೀಲ್ದಾರ್ ಉಪಸ್ಥಿತರಿದ್ದರು.
ಆಯ್ದ ಪಂಚಾಯತ್'ಗಳ ನಿವೇಶನ ಪಟ್ಟಿಯನ್ನು ಸಂಸದ ಕೋಟ ಅವರು ಭಾರತ್ ಪೆಟ್ರೋಲಿಯಂ ಅಧಿಕಾರಿಗಳಿಗೆ ಹಸ್ತಾಂತರಿಸಿದರು.