ಪರಸ್ಪರ ವಿಶ್ವಾಸದಿಂದ ಸಹಕಾರ ಸಂಸ್ಥೆ ವೃದ್ಧಿ

ಲೋಕಬಂಧು ನ್ಯೂಸ್ ಉಡುಪಿ, ಜು.29
ಪರಸ್ಪರ ನಂಬಿಕೆಯಿಂದ ಸಹಕಾರ ಸಂಸ್ಥೆಗಳ ವೃದ್ಧಿ ಸಾಧ್ಯ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್‌ ಹೇಳಿದರು.ಕಿನ್ನಿಮೂಲ್ಕಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಕಿದಿಯೂರು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯನ್ನು ಬುಧವಾರ ಉದ್ಘಾಟಿಸಿ, ಬಳಿಕ ಶ್ರೀ ವೀರಭದ್ರ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.


ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಹಕಾರ ಸಂಸ್ಥೆಗಳು ಶತಮಾನಗಳ ಕಾಲ ಬದುಕಿದ ಉದಾಹರಣೆ ಇದೆ. ವಿಶ್ವಾಸದ ಕೊರತೆಯ ಈ ದಿನಗಳಲ್ಲಿ ಸಹಕಾರ ಸಂಸ್ಥೆಗಳನ್ನು ನಡೆಸುವುದು ಸುಲಭವಲ್ಲ. ಸಂಸ್ಥೆಯ ಪ್ರವರ್ತಕರು, ಠೇವಣಿದಾರರು ಮತ್ತು ಸಾಲಗಾರರು ಪರಸ್ಪರ ವಿಶ್ವಾಸದಿಂದ ನಡೆದಾಗ ಮಾತ್ರ ಸಂಸ್ಥೆ ಮುನ್ನಡೆಯಲು ಸಾಧ್ಯ ಎಂದರು.


ಸಮಾಜದಲ್ಲಿ ಪರಸ್ಪರ ಅನುಕೂಲಿಗಳಾಗಿ ಬದುಕುವ ಕಲೆ ಕರಾವಳಿಯ ಈ ಅವಳಿ ಜಿಲ್ಲೆಗಿದೆ ಎಂದ ಸಂತೋಷ್ ಅವರು, ನೂತನ ಸಂಸ್ಥೆಗೆ ಶುಭವಾಗಲಿ ಎಂದು ಹಾರೈಸಿದರು.


ಅಭ್ಯಾಗತರಾಗಿದ್ದ ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ.ಜಿ. ಶಂಕರ್, ಕೇಂದ್ರ ಸರ್ಕಾರ ಸಣ್ಣ ಸಣ್ಣ ವಿತ್ತ ಸಂಸ್ಥೆಗಳಿಗೆ ವಿಧಿಸಲಾಗಿರುವ ಕಠಿಣ ನಿಯಮಗಳನ್ನು ತೆಗೆದುಹಾಕಿ ಕೆಲವೊಂದು ವಿನಾಯಿತಿಗಳನ್ನು
ನೀಡಬೇಕು ಎಂದರು.


ಬೆಂಗಳೂರು ಎಂ.ಆರ್.ಜಿ. ಗ್ರೂಪ್ ಆಡಳಿತ ನಿರ್ದೇಶಕ ಡಾ.ಕೆ.ಪ್ರಕಾಶ ಶೆಟ್ಟಿ ಶುಭ ಹಾರೈಸಿದರು.


ವಿಶೇಷ ಆಹ್ವಾನಿತರಾಗಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕರಾದ ಯಶಪಾಲ್ ಸುವರ್ಣ, ಗುರ್ಮೆ ಸುರೇಶ ಶೆಟ್ಟಿ, ಕಿರಣ್ ಕೊಡ್ಗಿ ಮತ್ತು ಗುರುರಾಜ್ ಗಂಟಿಹೊಳೆ, ಹಿರಿಯ ಸಹಕಾರಿ ಧುರೀಣ ಟಿ.ಶಂಭು ಶೆಟ್ಟಿ, ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಪಡುಬಿದ್ರಿ ಆಸ್ಪೆನ್ ಇನ್ಫ್ರಾಸ್ಟ್ರಕ್ಚರ್ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ, ಆದರ್ಶ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್, ಉದ್ಯಮಿ ಶ್ರೀಪತಿ ಭಟ್ ಉಚ್ಚಿಲ, ಟೌನ್ ಕೋ-ಆಪರೇಟಿವ್ ಅಧ್ಯಕ್ಷ ಜಯಪ್ರಕಾಶ ಕೆದ್ಲಾಯ, ಸದ್ಗುರು ಕೋ-ಆಪರೇಟಿವ್ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ ಅತಿಥಿಗಳಾಗಿದ್ದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಕಿದಿಯೂರು ಕ್ರೆಡಿಟ್ ಕೋ- ಆಪರೇಟಿವ್ ಅಧ್ಯಕ್ಷ ಕೆ.ಉದಯಕುಮಾರ್ ಶೆಟ್ಟಿ, ಕಿದಿಯೂರು ಸೊಸೈಟಿ ಮೂಲಕ ಹಲವರಿಗೆ ಉದ್ಯೋಗ ನೀಡುವ ಅವಕಾಶ ಲಭಿಸಿದೆ. ನನ್ನ ಗಳಿಕೆಯ ಒಂದು ಭಾಗವನ್ನು ವಿದ್ಯಾರ್ಥಿ ವೇತನ, ಬಡವರ ಆರೋಗ್ಯಕ್ಕೆ ಮೀಸಲಿಟ್ಟಿದ್ದೇನೆ ಎಂದರು.


ಅದಕ್ಕೂ ಮೊದಲು ಯಕ್ಷ ಗಾನ ನಾದ ವೈಕುಂಠ ಕಾರ್ಯಕ್ರಮ ನಡೆಯಿತು.