ಪದವಿಯೊಂದಿಗೆ ಮಾನವೀಯ ಗುಣ ಬೆಳೆಸಿಕೊಳ್ಳಿ

ಲೋಕಬಂಧು ನ್ಯೂಸ್ ಉಡುಪಿ, ಜು.21
ಕೇವಲ ಪದವಿ ಪಡೆಯುವುದರಿಂದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಪಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ಸಾಕಷ್ಟು ಕೌಶಲ್ಯಗಳ ತರಬೇತಿ ಪಡೆದಿರಬೇಕು. ಶೈಕ್ಷಣಿಕ ಪಠ್ಯದೊಂದಿಗೆ ವರ್ತಮಾನ ಕಾಲದ ಎಲ್ಲಾ ವಿದ್ಯಾಮಾನಗಳ ಅರಿವು ವಿದ್ಯಾರ್ಥಿಗಳಿಗಿರಬೇಕು. ಸಾಮರ್ಥ್ಯ ಸ್ಥಾಪಿಸಿಕೊಳ್ಳುವ ಮೂಲಕ ವೃತ್ತಿ ಕೌಶಲ್ಯದೊಂದಿಗೆ ಶ್ರದ್ಧೆವಹಿಸಿ ದುಡಿದರೆ ಉನ್ನತ ಸ್ಥಾನಗಳು ದೊರೆಯುತ್ತವೆ. ಅದರೊಂದಿಗೆ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್ ಕರೆ ನೀಡಿದರು.
ಇಲ್ಲಿನ ಯಕ್ಷಗಾನ ಕಲಾರಂಗ, ವಿದ್ಯಾಪೋಷಕ್'ನ ಅಂತಿಮ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಮೂರು ದಿನಗಳ ಸನಿವಾಸ ಶಿಬಿರ ಉದ್ಘಾಟಿಸಿ ಮಾತನಾಡಿದರು.


ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಬ್ಯಾಂಕ್ ಅಧಿಕಾರಿ ದೇವಾನಂದ ಉಪಾಧ್ಯಾಯ, ಉದ್ಯೋಗ ಪಡೆದು ಮೇಲಧಿಕಾರಿಗಳ ಮೆಚ್ಚುಗೆ ಗಳಿಸುವುದಕ್ಕೆ ಮೊದಲ ಭೇಟಿಯಲ್ಲಿಯೇ ಅವರ ಮೇಲೆ ನಾವು ಬೀರುವ ಪ್ರಭಾವ, ಹಿತ-ಮಿತ ಮಾತು, ವಿನೀತ ಭಾವ ಬಹಳ ಮುಖ್ಯವಾದ ಸಂಗತಿಗಳಾಗಿವೆ ಎಂದರು.


ಅಭ್ಯಾಗತರಾಗಿದ್ದ ರೋಟರಿ ಸಹಾಯಕ ಗವರ್ನರ್ ಹೇಮಂತ್ ಯು. ಕಾಂತ್ ಕಲಾರಂಗ ಸಮಾಜಮುಖಿಯಾಗಿ ಮಾಡುತ್ತಿರುವ ಕೆಲಸ ಶ್ಲಾಘನೀಯ. ಆರ್ಥಿಕವಾಗಿ ಅಸಹಾಯಕರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡುವುದಲ್ಲದೆ, ಶೈಕ್ಷಣಿಕ ಶಿಬಿರ ಏರ್ಪಡಿಸಿ ಅವರನ್ನು ದೇಶದ ಆಸ್ತಿಯನ್ನಾಗಿ ಮಾಡುವ ಕೆಲಸ ಅಭಿನಂದನೀಯ ಎಂದರು.


ಎಂ.ಜಿ.ಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ ನಾಯ್ಕ್ ಜ್ಞಾನ, ಕೌಶಲ್ಯ ಮೌಲ್ಯಗಳು ಸ್ಪರ್ಥಾತ್ಮಕ ಪ್ರಪಂಚದಲ್ಲಿ ವಿದ್ಯಾರ್ಥಿಗಳು ರೂಢಿಸಿಕೊಳ್ಳಲೇಬೇಕಾದ ಸಂಗತಿಗಳಾಗಿವೆ ಎಂದರು.

ಶಿಬಿರದ ನಿರ್ದೇಶಕ ಹುಬ್ಬಳ್ಳಿಯ ಮೈ ಲೈಫ್ ಸಂಸ್ಥಾಪಕ ಪ್ರವೀಣ್ ವಿ. ಗುಡಿ ತರಬೇತಿಯ ಅಂಶಗಳನ್ನು ಪ್ರಸ್ತಾಪಿಸಿದರು. ಸಂಸ್ಥೆಯ ಕೋಶಾಧಿಕಾರಿ ಪ್ರೊ.ಕೆ. ಸದಾಶಿವ ರಾವ್ ಇದ್ದರು.


ಸಂಸ್ಥೆ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು.