ನಾಗರ ಪಂಚಮಿಗೆ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿ

ಲೋಕಬಂಧು ನ್ಯೂಸ್ ಉಡುಪಿ, ಜು.21
ನಾಡಿನಾದ್ಯಂತ ಜನರು ನಾಗರ ಪಂಚಮಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಶ್ರದ್ದಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ನಾಗಾರಾಧನೆಗೆ ವಿಶೇಷ ಮಹತ್ವವಿದೆ. ಈ ಬಾರಿಯ ನಾಗರ ಪಂಚಮಿ ಹಬ್ಬದಂದು ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ಸ್ಥಳೀಯ ರಜೆ ಘೋಷಿಸುವಂತೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.ಬಹುಮುಖ್ಯವಾಗಿ ಬದುಕಿನ ಅನಿವಾರ್ಯತೆಗಾಗಿ ಉದ್ಯೋಗ ನಿಮಿತ್ತ ಎಲ್ಲೆಲೋ ಚದುರಿಹೋಗಿರುವ ಸಂಬಂಧಿಕರನ್ನು ಬೆಸೆಯುವ ನಾಗರ ಪಂಚಮಿಯಂದು ಕುಟುಂಬದ ಹೆಚ್ಚಿನ ಸದಸ್ಯರು ಮಾತೃ ಕುಟುಂಬ ಹಾಗೂ ಪಿತೃ ಕುಟುಂಬದ ಮೂಲ ನಾಗಬನಕ್ಕೆ ಹೋಗಿ ಅಲ್ಲಿ ತನು ಎರೆದು ಬರುವ ಧಾರ್ಮಿಕ ನಂಬಿಕೆ ಹಾಗೂ ಸಂಪ್ರದಾಯ ಇದೆ. ಬೇರೆ ಬೇರೆ ಕಡೆಯಲ್ಲಿರುವ ಎರಡೂ ಭಾಗದ ಕುಟುಂಬದ ಸದಸ್ಯರು ನಾಗದೇವರಿಗೆ ತನು ಅರ್ಪಿಸುವ ಧಾರ್ಮಿಕ ಆಚರಣೆ ಮೂಲಕ ಒಂದೇ ಸೂರಿನಡಿ ಸೇರುತ್ತಾರೆ.


ಕರಾವಳಿಯ ಜಿಲ್ಲೆಗಳಲ್ಲಿ ಪ್ರತಿ ಕುಟುಂಬಕ್ಕೂ ಒಂದು ಮೂಲಸ್ಥಾನದ ನಾಗಬನ ಇದ್ದು, ನಾಗನ ಕಲ್ಲುಗಳು ಇರುವ ತಾಣಕ್ಕೆ ಹಿರಿಯರು- ಮಕ್ಕಳು ಸೇರಿದಂತೆ ಕುಟುಂಬ ಸಮೇತರಾಗಿ ತೆರಳಿ, ಭಕ್ತರು ನಾಗ ದೇವರಿಗೆ ಹಾಲೆರೆದು ಪೂಜೆ ಸಲ್ಲಿಸುತ್ತಾರೆ. ಇಂಥ ಸಂಸ್ಕೃತಿ ಹೊಂದಿರುವ ನಮ್ಮ ತುಳುನಾಡಿಗೆ ಪುರಾಣಗಳಲ್ಲಿ 'ನಾಗರಖಂಡ' ಎಂದು ಕರೆಯುವ ಉಲ್ಲೇಖವಿದೆ. ದೈವಿಕ ಶಕ್ತಿ, ಧಾರ್ಮಿಕ ಆಚರಣೆಯ ತಳಹದಿಯ ಮೇಲೆ ನಿಂತಿರುವ ತುಳುನಾಡಿನಲ್ಲಿ ನಾಗಾರಾಧನೆ ಹೆಚ್ಚು ವಿಶೇಷತೆ ಹೊಂದಿದೆ.


ಪಾರಂಪರಿಕವಾಗಿ ಮತ್ತು ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿರುವ ನಾಗರ ಪಂಚಮಿ ಹಬ್ಬದ ಬಗ್ಗೆ ಯುವ ಪೀಳಿಗೆಯ ವಿದ್ಯಾರ್ಥಿಗಳಿಗೆ ಪರಿಚಯಿಸಿ ಮುಂದುವರಿಸಿಕೊಂಡು ಹೋಗಲು ಅನುಕೂಲವಾಗುವಂತೆ ಹಾಗೂ ಸಾರ್ವಜನಿಕರ ಮನವಿಯ ಮೇರೆಗೆ ಆಗಸ್ಟ್ 17ರಂದು ಆಚರಿಸುವ ನಾಗರ ಪಂಚಮಿಯಂದು ಶೈಕ್ಷಣಿಕ ಸಂಸ್ಥೆಗಳಿಗೆ ಜಿಲ್ಲಾದ್ಯಂತ ಸ್ಥಳೀಯ ರಜೆ ಘೋಷಣೆ ಮಾಡಲು ಕ್ರಮ ವಹಿಸುವಂತೆ ಶಾಸಕ ಯಶಪಾಲ್ ಸುವರ್ಣ ಮನವಿ ಮಾಡಿದ್ದಾರೆ.