ಲೋಕಬಂಧು ನ್ಯೂಸ್ | ಪಡುಬಿದ್ರಿ, ಜು.18
ಮುಂಗಾರು ಮಳೆ ಅಭಾವದಿಂದ ಉಡುಪಿ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಹಾಗಾಗಿ ಉಡುಪಿಯನ್ನು ತಕ್ಷಣ ಬರ ಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಎಂದು ಜಾತ್ಯತೀತ ಜನತಾದಳ ಆಗ್ರಹಿಸಿದೆ.
ವಿಧಾನ ಪರಿಷತ್ ಸದಸ್ಯ, ಕರಾವಳಿ ಭಾಗದ ಅಧ್ಯಯನ ತಂಡದ ಉಸ್ತುವಾರಿ ಎಸ್.ಎಲ್.ಭೋಜೇಗೌಡ ನೇತೃತ್ವದ ತಂಡ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿತು.
ಮಳೆ ಕೊರತೆಯಿಂದ ಬೆಳೆ ಒಣಗಿದ್ದು ಕೆಲವು ಕಡೆಗಳಲ್ಲಿ ಬಿತ್ತನೆಯೇ ಸಾಧ್ಯವಾಗಿಲ್ಲ. ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಇದುವರೆಗೆ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಸಮಸ್ಯೆ ಆಲಿಸದಿರುವುದು ಬೇಸರದ ಸಂಗತಿ. ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಜೆಡಿಎಸ್ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ತಾಲೂಕು ಘಟಕದ ಅಧ್ಯಕ್ಷ ಶ್ರೀಕಾಂತ್ ಕುಚೂರು, ಜಯ ಪೂಜಾರಿ, ದೇವರಾಜ್ ತೊಟ್ಟಂ, ಅನಸೂಯ ಶೆಟ್ಟಿ, ಯೋಗೀಶ್ ಶೆಟ್ಟಿ ಜೆಪ್ಪು, ಅಕ್ಷಿತ್ ಸುವರ್ಣ, ರತ್ನಾಕರ್ ಸುವರ್ಣ, ಕೀರ್ತಿರಾಜ್ ಪಾಲ್ಗೊಂಡಿದ್ದರು.
