ಲೋಕಬಂಧು ನ್ಯೂಸ್ | ಕಾರ್ಕಳ, ಜು.18
ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹುಂಡಿ ಹಣ ದುರುಪಯೋಗದ ಆರೋಪದಲ್ಲಿ ದೇವಳದ ಕಚೇರಿಯ ಡಾಟಾ ಎಂಟ್ರಿ ಆಪರೇಟರ್ ಅಕ್ಷಯ ದೇವಾಡಿಗನನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಎಣ್ಣೆಹೊಳೆ ಮರ್ಣೆ ನಿವಾಸಿ ಅಕ್ಷಯ ದೇವಾಡಿಗ 2022ರ ಡಿ.1ರಿಂದ 2026ರ ಮೇ 7ರ ವರೆಗೆ ಡಾಟಾ ಎಂಟ್ರಿ ಆಪರೇಟರ್ ಆಗಿ ಕಾರ್ಯ ನಿರ್ವಹಿಸಿಕೊಂಡಿದ್ದು, ಇಲಾಖಾ ಲೆಕ್ಕಪರಿಶೋಧನೆ ಸಂದರ್ಭದಲ್ಲಿ ಕರ್ತವ್ಯ ಲೋಪ ಮತ್ತು ಅಕ್ರಮ ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ವಿವರಣೆ ಕೇಳಿದಾಗ ಆತ ಯಾವುದೇ ಮಾಹಿತಿ ನೀಡದೆ ಕಳೆದ ಮೇ 7ರಂದು ಕರ್ತವ್ಯಕ್ಕೆ ರಾಜೀನಾಮೆ ನೀಡಿದ್ದ.
ಇಂಡಿಯನ್ ಓವರ್ಸೀಸ್ ಬ್ಯಾಂಕ್‌ನ ದೇವಳಕ್ಕೆ ಸಂಬಂಧಪಟ್ಟ ಖಾತೆಯ 6 ಚೆಕ್'ಗಳನ್ನು ಜೂ. 24ರಂದು ನಗದುಗೊಳಿಸಲು ಹಾಜರುಪಡಿಸಿದಾಗ ಬ್ಯಾಂಕ್ ಮ್ಯಾನೇಜರ್ ಮತ್ತು ಸಿಬ್ಬಂದಿ ಅನುಮಾನಗೊಂಡು ವಿಚಾರಿಸಿದಾಗ ಸರಿಯಾದ ವಿವರಣೆ ನೀಡದ ಕಾರಣ ನಗದುಗೊಳಿಸಿರಲಿಲ್ಲ.
ಆರೋಪಿ ಅಕ್ಷಯ ದೇವಾಡಿಗ ಖಾಲಿ ಚೆಕ್ ಹಾಳೆಗಳನ್ನು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರ ಗಮನಕ್ಕೆ ತಾರದೆ ನಕಲಿ ಸಹಿ ಮಾಡಿ ಮೋಸ ಮಾಡಿದ್ದು, ಆ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಯನ್ನು ಶನಿವಾರ ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
