ರಸ್ತೆಯಲ್ಲಿ ಡೀಸೆಲ್ ಸೋರಿಕೆ: ಸರಣಿ ಅಪಘಾತ

ಲೋಕಬಂಧು ನ್ಯೂಸ್, ಕಾರ್ಕಳ, ಜು.21
ರಾಷ್ಟ್ರೀಯ ಹೆದ್ದಾರಿ169ರ ಚಿಕ್ಕಮಗಳೂರು- ಉಡುಪಿ ಗಡಿಭಾಗದ ಮಾಳ ಘಾಟ್‌ನಲ್ಲಿ ಸೋಮವಾರ ಟಿಪ್ಪರ್‌ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಮೇಲೆ ಡೀಸೆಲ್ ಸೋರಿಕೆಯಾಗಿ, ಬಳಿಕ ನಡೆದ ಸರಣಿ ಅಪಘಾತದಲ್ಲಿ ಎರಡು ಕಾರುಗಳು ಜಾರಿ ಅವಘಡಕ್ಕೀಡಾದ ಘಟನೆ ಸಂಭವಿಸಿದೆ.
ಡೀಸೆಲ್‌ನಿಂದಾಗಿ ರಸ್ತೆ ಜಾರುವಂತಾಗಿದ್ದ ಕಾರಣ ಹಿಂದಿನಿಂದ ಬಂದ ಎರಡು ಕಾರುಗಳು ನಿಯಂತ್ರಣ ಕಳೆದುಕೊಂಡು ಪರಸ್ಪರ ಢಿಕ್ಕಿ ಹೊಡೆದಿದ್ದು, ಒಂದು ಕಾರು ಪಲ್ಟಿಯಾಗಿದೆ. ಅಪಘಾತದಲ್ಲಿ ವಾಹನಗಳಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಘಟನೆಯಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮಾಹಿತಿ ಪಡೆದ ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ರಸ್ತೆ ಮೇಲೆ ಮರಳು ಹಾಕಿ ಡೀಸೆಲ್ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.
ನಿರಂತರ ಮಳೆಯಿಂದ ಘಾಟ್ ರಸ್ತೆಗಳು ಜಾರುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಹಾಗೂ ವೇಗ ನಿಯಂತ್ರಿಸಿ ವಾಹನ ಚಲಾಯಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.