ಸುಳ್ಳು ಜಾತಿ ಪ್ರಮಾಣಪತ್ರ: ದೂರು ದಾಖಲಿಸಲು ದಲಿತರ ಆಗ್ರಹ

ಲೋಕಬಂಧು ನ್ಯೂಸ್ | ಉಡುಪಿ, ಜು.18
ಉಡುಪಿ ಜಿಲ್ಲೆಯಲ್ಲಿ ತಮಿಳುನಾಡು ಮೂಲದವರು ಸುಳ್ಳು ಜಾತಿ ಸರ್ಟಿಫಿಕೇಟ್ ಪಡೆದು ದಲಿತರ ಸೌಲಭ್ಯ ಪಡೆದಿದ್ದು, ಆ ಬಗ್ಗೆ  ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ (ಡಿಸಿಆರ್.ಇ) ಪೊಲೀಸ್ ಠಾಣೆಯಲ್ಲಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು.
ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು


ಪರಿಶಿಷ್ಟ ಜಾತಿ ಮತ್ತು ಪಂಗಡದವರ ವಿರುದ್ಧ ಪ್ರಕರಣ ದಾಖಲಿಸಿದಾಗ ನ್ಯಾಯಯುತವಾಗಿ ದೊರೆಯಬೇಕಾದ ಪರಿಹಾರ ದೊರೆಯುತ್ತಿಲ್ಲ. ದಲಿತರ ಸಮಸ್ಯೆಗಳಿಗೆ ಜಿಲ್ಲಾ ಪೊಲೀಸ್ ಇಲಾಖೆ ಉತ್ತಮವಾಗಿ ಸ್ಪಂದಿಸುತ್ತಿದೆ. ಅದೇ ರೀತಿ ಇತರ ಇಲಾಖೆಗಳೂ ಸ್ಪಂದಿಸುವಂತೆ ಸೂಚಿಸಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಸೂಚಿಸಲಾಯಿತು.


ಜಿಲ್ಲಾಧಿಕಾರಿ ನೇತೃತ್ವದ ಜಾಗೃತ ಸಮಿತಿ ಸದಸ್ಯರನ್ನು ಬದಲಾಯಿಸುವಂತೆ ದಲಿತ ಮುಖಂಡರು ಮನವಿ ಮಾಡಿದರು.


ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಲಿತರ ಏಳಿಗೆಗೆ ನೀಡಲಾದ ಸರಕಾರದ ಅನುದಾನ ದುರ್ಬಳಕೆ ಆಗಿದ್ದು, ಆ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಸೂಚಿಸಲಾಯಿತು.


ದಲಿತರಿಗೆ ಸಹಾಯವಾಗಲು ಪ್ರತಿಯೊಂದು ಜಿಲ್ಲೆಯಲ್ಲಿಯೂ ಡಿಸಿಆರ್.ಇ ಠಾಣೆ ಸ್ಥಾಪನೆಯಾಗಿದ್ದರೂ ಅಧಿಕಾರಿ ಹಾಗೂ ಸಿಬಂದಿ ನೇಮಕ ಆಗಿಲ್ಲ. ಅದರಿಂದ ದಲಿತರಿಗೆ ನ್ಯಾಯ ದೊರೆಯಲು ವಿಳಂಬವಾಗುತ್ತಿದೆ. ಈ ಕುರಿತು ಸರ್ಕಾರದ ಗಮನಕ್ಕೆ ತರುವಂತೆ ಸಭೆ ಸೂಚಿಸಿತು.


ಎಸ್ಸಿ/ಎಸ್ಟಿ ಪ್ರಕರಣದಲ್ಲಿ ಆರೋಪಿಗಳು ನ್ಯಾಯಾಲಯದ ತಡೆಯಾಜ್ಞೆ ತರುತ್ತಿದ್ದು, ಅದನ್ನು ತೆರವುಗೊಳಿಸುವ ಬಗ್ಗೆ ಡಿಸಿಆರ್.ಇ ಠಾಣೆಯವರು ಸರಿಯಾಗಿ ಕ್ರಮ ಕೈಗೊಳ್ಳದಿರುವ ಬಗ್ಗೆ ಆಕ್ರೋಶ ವ್ಯಕ್ತವಾಯಿತು.
ಜಿಲ್ಲೆಯ 53 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮುಖಂಡರು ಹಾಗೂ ಸಮುದಾಯದವರು ಸಭೆಯಲ್ಲಿ ಭಾಗವಹಿಸಿದ್ದರು.