ಲೋಕಬಂಧು ನ್ಯೂಸ್ | ಉಡುಪಿ, ಜು.29
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ವಿರುದ್ಧ ದೇಶಾದ್ಯಂತ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ವಿರೋಧಿಸಿ ಉಡುಪಿ ಜಿಲ್ಲಾ ಬಿಜೆಪಿ ಮಂಗಳವಾರ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಶಾಸಕ ಯಶ್‌ಪಾಲ್ ಸುವರ್ಣ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿರುವುದು ಖಂಡನೀಯ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.
ರಾಜಕೀಯದಲ್ಲಿ ವಿಭಿನ್ನ ಸಿದ್ದಾಂತಗಳು ಪ್ರಜಾಪ್ರಭುತ್ವದ ಭಾಗವಾಗಿದ್ದು, ಟೀಕೆ ಮತ್ತು ಯಾವುದೇ ಪ್ರತಿಕ್ರಿಯೆಗಳು ಗೌರವಯುತ ಹಾಗೂ ಸೌಜನ್ಯದ ಭಾಷೆಯಲ್ಲಿರಬೇಕು. ರಾಹುಲ್ ಗಾಂಧಿ ಅವರನ್ನು 'ಡ್ರಗ್ ಎಡಿಕ್ಟ್' ಎಂದು ನಿಂದಿಸಿ ಅವರ ವಂಶವನ್ನು ಧ್ವಂಸ ಮಾಡುವುದಾಗಿ ಬಹಿರಂಗವಾಗಿ ಹೇಳಿರುವ ಉಡುಪಿ ಶಾಸಕರ ಗೂಂಡಾ ಸಂಸ್ಕೃತಿಯನ್ನು ಬಲವಾಗಿ ಖಂಡಿಸುವುದಾಗಿ ಕಾಂಚನ್ ತಿಳಿಸಿದ್ದಾರೆ.
ಶಾಸಕ ಯಶಪಾಲ್ ಸುವರ್ಣ ಅವರು ದೇಶದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸಂಬೋಧಿಸಿ ರಾಹುಲ್ ಗಾಂಧಿ ವಂಶ ಹಾಗೂ ಕಾಂಗ್ರೆಸ್ ಪಕ್ಷವನ್ನು ಧ್ವಂಸ ಮಾಡುವುದಾಗಿ ಹೇಳಿರುವುದು ಅವರ ನೀಚ ಮನಸ್ಥಿತಿಯನ್ನು ತೋರಿಸುತ್ತದೆ. ಯಶಪಾಲ್ ಸುವರ್ಣ ಇನ್ನೊಮ್ಮೆ ಜನ್ಮ ತಳೆದು ಬಂದರೂ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ಓರ್ವ ಕಾರ್ಯಕರ್ತನನ್ನು ಮುಟ್ಟುವ ತಾಕತ್ತು ಅವರಿಗಿಲ್ಲ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಅಕ್ರಮದಲ್ಲಿ ನೊಂದಿರುವ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಪರವಾಗಿ ರಾಹುಲ್ ಗಾಂಧಿ ಧ್ವನಿ ಎತ್ತಿದ್ದಾರೆ. ಅದರಿಂದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಓರ್ವ ಪ್ರಭಾವಿ ಸಚಿವ ರಾಜೀನಾಮೆ ನೀಡಿದ್ದು ಇದು ಬಿಜೆಪಿ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ರಾಹುಲ್ ಗಾಂಧಿ ಕುರಿತು ಸಾರ್ವಜನಿಕ ಸಭೆಯಲ್ಲಿ ಸುಳ್ಳು ಸುಳ್ಳು ವಿಚಾರ ಸೃಷ್ಟಿಸಿ ಅಸಹ್ಯವಾಗಿ ಮಾತನಾಡಿ ಬಿಜೆಪಿಯ ಅಂಧಭಕ್ತರನ್ನು ಸಂತೋಷಪಡಿಸಬಹುದು. ಆದರೆ, ಜನರು ನಿಮ್ಮನ್ನು ಗಂಭೀರವಾಗಿ ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ರಮೇಶ್ ಕಾಂಚನ್ ಎಚ್ಚರಿಕೆ ನೀಡಿದ್ದಾರೆ.
ದೇಶದ ವಿದ್ಯಾರ್ಥಿಗಳು ರಾಷ್ಟ್ರ ರಾಜಧಾನಿ ಸೇರಿದಂತೆ ದೇಶದಾದ್ಯಂತ ಹೋರಾಟ ನಡೆಸಿರುವುದು ಪ್ರಧಾನಿಯ ನಿದ್ದೆಗೆಡಿಸಿದ್ದು ಮಧ್ಯ ರಾತ್ರಿ ಎದ್ದು ರೀಲ್ಸ್ ಮಾಡಿ ವಿದ್ಯಾರ್ಥಿಗಳನ್ನು ಸಮಾಧಾನಪಡಿಸುವುದು ಕಂಡರೆ ಎಷ್ಟೊಂದು ತಲೆಕೆಡಿಸಿಕೊಂಡಿದ್ದಾರೆ ಎನ್ನುವುದನ್ನು ತೋರಿಸುತ್ತದೆ.
ನಟ ಪ್ರಕಾಶ್ ರಾಜ್ ಅವರನ್ನು ಅರಬ್ಬೀ ಸಮುದ್ರಕ್ಕೆ ಎಸೆದು ಮೀನುಗಳಿಗೆ ಆಹಾರವಾಗಿಸುವುದಾಗಿ ಹೇಳಿಕೆ ನೀಡಿದ ಯಶಪಾಲ್ ಸುವರ್ಣ ಅವರದ್ದು ಭಯೋತ್ಪಾದಕ ಮನಸ್ಥಿತಿ.
ಯುವ ಸಮೂಹ ಹಾಗೂ ವಿದ್ಯಾರ್ಥಿಗಳಿಂದಲೇ ಅಧಿಕಾರ ಪಡೆದುಕೊಂಡ ಬಿಜೆಪಿ ಹಾಗೂ ಯಶಪಾಲ್ ಸುವರ್ಣ ಇಂದು ಅದೇ ವಿದ್ಯಾರ್ಥಿ ಹಾಗೂ ಯುವ ಸಮೂಹವನ್ನು ಭಯೋತ್ಪಾದಕರು ಹಾಗೂ ದೇಶದ್ರೋಹಿಗಳು ಎಂದು ಹೇಳಿರುವುದು ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ರಮೇಶ್ ಕಾಂಚನ್ ತಿಳಿಸಿದ್ದಾರೆ.
