ಮಹಿಳೆಯರ ಸ್ವಾವಲಂಬನೆಗೆ ಮುನ್ನುಡಿ

ಲೋಕಬಂಧು ನ್ಯೂಸ್ ಉಡುಪಿ, ಜು.21
ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಮತ್ತು ಸ್ವಯಂ ಉದ್ಯೋಗ ಕಂಡುಕೊಳ್ಳಲು ಪೂರಕವಾದ ಮೂರು ದಿನಗಳವಧಿಯ ಸೀರೆ ಡ್ರೇಪಿಂಗ್, ಅಡ್ವಾನ್ಸ್ಡ್ ಬಾಕ್ಸ್ ಫೋಲ್ಡಿಂಗ್ ಹಾಗೂ ಆಧುನಿಕ ಕೇಶವಿನ್ಯಾಸ ತರಬೇತಿ ಕಾರ್ಯಾಗಾರ ಉಡುಪಿಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಷ್ಟ್ರೀಯ ಸ್ವಸಹಾಯ ಸಂಘಗಳ ತರಬೇತಿ ಸಂಸ್ಥೆಯಲ್ಲಿ ನಡೆಯಿತು.ಕಾರ್ಯಾಗಾರ ಉದ್ಘಾಟಿಸಿದ ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ಅನಿತಾ ಶೆಟ್ಟಿ, ಇತ್ತೀಚಿನ ದಿನಗಳಲ್ಲಿ ಶುಭ ಸಮಾರಂಭಗಳು, ಮದುವೆ ಹಾಗೂ ಹಬ್ಬ ಹರಿದಿನಗಳಲ್ಲಿ ವೃತ್ತಿಪರ ಸೀರೆ ಉಡಿಸುವಿಕೆ ಮತ್ತು ಸೀರೆಗಳನ್ನು ಮೊದಲೇ ನೆರಿಗೆ ಮಾಡಿ ಮಡಚಿಡುವ ಪ್ರಿ-ಪ್ಲೀಟಿಂಗ್ ಮತ್ತು ಬಾಕ್ಸ್ ಫೋಲ್ಡಿಂಗ್ ಕಲೆಗೆ ಭಾರಿ ಬೇಡಿಕೆ ಇದೆ. ಅದನ್ನು ಮನಗಂಡು ಮಹಿಳೆಯರಿಗೆ ಮನೆಯಲ್ಲೇ ಕುಳಿತು ಆದಾಯ ಗಳಿಸುವ ತಂತ್ರಗಳನ್ನು ಹೇಳಿಕೊಡುವುದು ಈ ಕಾರ್ಯಾಗಾರದ ಮುಖ್ಯ ಉದ್ದೇಶ ಎಂದರು.


ಸೌಂದರ್ಯ ತಜ್ಞೆ ಲಾವಣ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ತರಬೇತಿ ನೀಡಿದ್ದು, ಉಡುಪಿ ಜಿಲ್ಲೆಯ ವಿವಿಧ ಭಾಗಗಳ ಆಯ್ದ 30 ಮಂದಿ ತರಬೇತಿಯಲ್ಲಿ ಭಾಗವಹಿಸಿದ್ದರು. ಎಲ್ಲಾ ಅಭ್ಯರ್ಥಿಗಳಿಗೆ ಪ್ರಶಂಸನಾ ಪತ್ರ ನೀಡಲಾಯಿತು.


ಸಂಸ್ಥೆಯ ಕಂಪ್ಯೂಟರ್ ಶಿಕ್ಷಕಿ ಪ್ರಮೀಳ ಸಂಯೋಜಿಸಿದರು. ಉಪನ್ಯಾಸಕರಾದ ನವೀನ್ ಶೆಟ್ಟಿ ಹಾಗೂ ಸಂದೀಪ್ ಕೆ.ಟಿ. ಉಪಸ್ಥಿತರಿದ್ದರು.