ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

ಲೋಕಬಂಧು ನ್ಯೂಸ್ ನವದೆಹಲಿ, ಜು.21
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಯುವಜನರು ಸಾಗರೋಪಾದಿಯಲ್ಲಿ ಹರಿದುಬಂದು ಕೇಂದ್ರ ಸರ್ಕಾರದ ವಿರುದ್ಧ ಘರ್ಜಿಸಿದರು. ಪ್ರತಿಭಟನಾನಿರತರ ಮೇಲೆ ಪೊಲೀಸರು ಲಾಠಿ ಪ್ರಹಾರ ಹಾಗೂ ಆಶ್ರುವಾಯು ಪ್ರಯೋಗಿಸಿದರು. ಅದರಿಂದಾಗಿ ಜಂತರ್ ಮಂತರ್ ಹಾಗೂ ಸಂಸತ್ ಸುತ್ತಲಿನ ಪ್ರದೇಶ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತು.


ಸಂಸತ್‌ ಮಳೆಗಾಲದ ಅಧಿವೇಶನದ ಮೊದಲ ದಿನವೇ ನಡೆದ 'ಜೆನ್-ಜಿ' ಹಾಗೂ ಯುವ ಜನರ ಹೋರಾಟದಿಂದ ಕೇಂದ್ರ ಸರ್ಕಾರ ಮುಜುಗರಕ್ಕೆ ಸಿಲುಕಿತು. ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಕದ ಬಡಿದಿರುವ ಹೊತ್ತಿನಲ್ಲಿ ಯುವಸಮೂಹ ಸಿಡಿದೆದ್ದಿರುವುದು ಕೇಂದ್ರದ ಕಳವಳಕ್ಕೆ ಕಾರಣವಾಗಿದೆ.

ಪ್ರತಿಭಟನಾಕಾರರು ಧ್ವಜ ಮತ್ತು ಫಲಕಗಳನ್ನು ಹಿಡಿದು ಗುಂಪುಗಳಲ್ಲಿ ಆಗಮಿಸಿ ಮೆರವಣಿಗೆ ನಡೆಸಿ ಸಂಸತ್ತಿನ ಕಡೆಗೆ ಹೋಗುವ ರಸ್ತೆಗಳಲ್ಲಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಂತ‌ರ್ ಮಂತರ್‌ನಲ್ಲಿ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಜೆನ್ ಜಿಗಳು ಹಾಗೂ ಹಿರಿಯ ನಾಗರಿಕರನ್ನು ಒಳಗೊಂಡ ಬೃಹತ್ ಜನಸಮೂಹ ಜಮಾಯಿಸಿ ನೀಟ್ ಪರೀಕ್ಷಾ ವೈಫಲ್ಯಕ್ಕೆ ಕೇಂದ್ರ ಸರ್ಕಾರ ಹೊಣೆ ಹೊರಬೇಕು ಎಂದು ಪಟ್ಟುಹಿಡಿಯಿತು. ಕೆಲವು ಮಕ್ಕಳು ಶಾಲಾ ಸಮವಸ್ತ್ರದಲ್ಲಿ ಬಂದರು. ಇತರರು ಜಿರಳೆ ವೇಷಭೂಷಣಗಳನ್ನು ಧರಿಸಿ ಪ್ರತಿಭಟಿಸಿದರು.