ಲೋಕಬಂಧು ನ್ಯೂಸ್, ಬ್ರಹ್ಮಾವರ ಜು.22
ಸಾರ್ವಜನಿಕರ ಸಾರಿಗೆ ವ್ಯವಸ್ಥೆಯಲ್ಲಿ ವಿಶೇಷ ಪಾತ್ರ ವಹಿಸುವ ರಿಕ್ಷಾ ಚಾಲಕರ ಅಗತ್ಯ ಬೇಡಿಕೆಗಳ ಈಡೇರಿಕೆ ಹಾಗೂ ಪೂರಕ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವುದಾಗಿ ಉಡುಪಿ ಶಾಸಕ ಯಶಪಾಲ್ ಸುವರ್ಣ ಹೇಳಿದರು.ಬೈಕಾಡಿ ದೇವಕಿ ಕನ್ವೆನ್ಷನ್ ಸಭಾಂಗಣದಲ್ಲಿ ನಡೆದ ಬ್ರಹ್ಮಾವರ ವಲಯದ ರಿಕ್ಷಾ ಚಾಲಕ ಮತ್ತು ಮಾಲಕರ ಕುಂದು ಕೊರತೆಗಳ ಬಗ್ಗೆ ಆಯೋಜಿಸಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬ್ರಹ್ಮಾವರ ಭಾಗದ ರಿಕ್ಷಾ ಚಾಲಕರ ಪ್ರಮುಖ ಬೇಡಿಕೆಗಳಾದ ದೂಪದಕಟ್ಟೆಯಿಂದ ಉಪ್ಪಿನಕೋಟೆ ವರೆಗಿನ ಸರ್ವಿಸ್ ರಸ್ತೆ ನಿರ್ಮಾಣ, ರಿಕ್ಷಾ ದರ ಪರಿಷ್ಕರಣೆ, ಸಿ. ಎನ್.ಜಿ. ನಿರಂತರ ಪೂರೈಕೆ, ತಾಲೂಕು ಕೇಂದ್ರವಾಗಿರುವ ಬ್ರಹ್ಮಾವರದಲ್ಲಿ ವಾರದಲ್ಲಿ ಒಂದು ದಿನ ಸಾರಿಗೆ ಇಲಾಖೆಗೆ ಸಂಬಂಧಿತ ಕೆಲಸಗಳಿಗಾಗಿ ಆರ್.ಟಿ.ಓ. ಕ್ಯಾಂಪ್, ರಿಕ್ಷಾ ನಿಲ್ದಾಣದಲ್ಲಿ ಶೆಲ್ಟರ್ ನಿರ್ಮಾಣಕ್ಕೆ ಆದ್ಯತೆ ನೀಡಿ ಯತ್ನಿಸುವುದಾಗಿ ಭರವಸೆ ನೀಡಿದರು.
ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ಮಾತನಾಡಿ, ರಿಕ್ಷಾ ಚಾಲಕರ ಸಮಸ್ಯೆಗಳ ಬಗ್ಗೆ ಸದಾ ಸ್ಪಂದಿಸುವ ಶಾಸಕರು ಇದೀಗ ತಾವೇ ಮುತುವರ್ಜಿ ವಹಿಸಿ ರಿಕ್ಷಾ ಚಾಲಕರ ಕುಂದು ಕೊರತೆಗಳ ಬಗ್ಗೆ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.
ರಿಕ್ಷಾ ಚಾಲಕರ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸುವ ಕಾರ್ಯವೈಖರಿಗೆ ಪೂರಕವಾಗಿ ಅಗತ್ಯ ಸಂದರ್ಭದಲ್ಲಿ ರಿಕ್ಷಾ ಚಾಲಕರಿಗೆ ಉಚಿತ ಕಾನೂನು ಸಲಹೆ ನೀಡಲು ಸದಾ ಸಿದ್ಧ ಎಂದು ವಕೀಲ ಬೈಕಾಡಿ ಸುಪ್ರಸಾದ್ ಶೆಟ್ಟಿ ಹೇಳಿದರು.
ಬ್ರಹ್ಮಾವರ ವಲಯದ ವಿವಿಧ ರಿಕ್ಷಾ ನಿಲ್ದಾಣದ ಸುಮಾರು 200 ಮಂದಿ ರಿಕ್ಷಾ ಚಾಲಕರು ಸಭೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆ ಬೇಡಿಕೆಗಳ ಬಗ್ಗೆ ಶಾಸಕರೊಂದಿಗೆ ಸಮಾಲೋಚನೆ ನಡೆಸಿದರು.
ಸಭೆಯಲ್ಲಿ ಉಡುಪಿಯ ಹಿರಿಯ ವಕೀಲ ಹರಿಮಕ್ಕಿ ರತ್ನಾಕರ ಶೆಟ್ಟಿ, ರಿಕ್ಷಾ ಚಾಲಕರ ಸಂಘದ ಮುಖಂಡ ಭಾಸ್ಕರ ಪೂಜಾರಿ, ಸೂರ್ಯ ಪೂಜಾರಿ ಆರೂರು ಮೊದಲಾದವರಿದ್ದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ರಾಜೀವ್ ಕುಲಾಲ್ ಸ್ವಾಗತಿಸಿ, ಕಮಲಾಕ್ಷ ಹೆಬ್ಬಾರ್ ವಂದಿಸಿದರು. ಮನೋಜ್ ಶೆಟ್ಟಿ ಕಳ್ತೂರು ಕಾರ್ಯಕ್ರಮ ನಿರೂಪಿಸಿದರು.