ಹೃದಯ ಸ್ತಂಭನಕ್ಕೆ ಯಶಸ್ವಿ ಎಕ್ಮೋ ಚಿಕಿತ್ಸೆ

ಲೋಕಬಂಧು ನ್ಯೂಸ್ | ಮಣಿಪಾಲ, ಜು.18
ಹಠಾತ್ ಹೃದಯ ಸ್ತಂಭನಕ್ಕೆ ಒಳಗಾಗಿ ಕುಸಿದು ಬಿದ್ದಿದ್ದ ವ್ಯಕ್ತಿಯೊಬ್ಬರು ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಎಕ್ಮೋ ಚಿಕಿತ್ಸೆ ಮೂಲಕ ಯಾವುದೇ ನರವೈಜ್ಞಾನಿಕ ಹಾನಿಯಿಲ್ಲದೆ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಮಣಿಪಾಲದ ವ್ಯಕ್ತಿಯೋರ್ವರು ತಮ್ಮ ಮನೆಯಲ್ಲಿ ಕುಸಿದು ಬಿದ್ದಿದ್ದು, ಕೂಡಲೇ ಎದೆಯ ಒತ್ತಡ ಚಕಿತ್ಸೆ (ಸಿಪಿಆರ್) ಆರಂಭಿಸಿ, ನಿವಾಸದಲ್ಲಿಯೇ ಇಂಟ್ಯುಬೇಷನ್ ಮಾಡಿ ಅವರನ್ನು ಕೆಎಂಸಿ ಆಸ್ಪತ್ರೆಗೆ ಕರೆತಂದಿದ್ದು, ಪರೀಕ್ಷಿಸಿದ ವೈದ್ಯರು ತುರ್ತು ವಿಭಾಗಕ್ಕೆ ಸ್ಥಳಾಂತರಿಸಿದರು.


ಹಲವು ಬಾರಿ ಡಿಫಿಬ್ರಿಲೇಟರ್ ಶಾಕ್ ನೀಡಿದ ಬಳಿಕ ಸುಮಾರು ಒಂದು ಗಂಟೆಯಲ್ಲಿ ರಕ್ತ ಪರಿಚಲನೆ ಮರಳಿತು.


ರೋಗಿ ಆಸ್ಪತ್ರೆಗೆ ದಾಖಲಾಗಿದ್ದಾಗ ಅವರ ಎರಡೂ ಶ್ವಾಸಕೋಶಗಳು ಪಲ್ಮನರಿ ಎಡಿಮಾದಿಂದ ತುಂಬಿಕೊಂಡು ರಕ್ತ ಪರಿಚಲನೆಯನ್ನು ಸ್ವತಃ ನಿಭಾಯಿಸುವ ಸ್ಥಿತಿಯಲ್ಲಿ ಹೃದಯ ಇರಲಿಲ್ಲ. ಹೃದಯ ಮತ್ತು ಶ್ವಾಸಕೋಶಗಳ ಕೆಲಸವನ್ನು ತಾನೇ ನಿರ್ವಹಿಸುವ ವೀನೋ ಆರ್ಟಿರಿಯಲ್ ಎಕ್ಮೋ ವ್ಯವಸ್ಥೆಯನ್ನು 30 ನಿಮಿಷಗಳೊಳಗಾಗಿ ನೀಡಿ 36 ಗಂಟೆಗಳ ಬಳಿಕ ಎಕ್ಮೋದಿಂದ ಹೊರತಂದು ಎಕ್ಸ್ಟ್ಯುಬೇಷನ್ ಮಾಡಲಾಯಿತು.


ಯಾವುದೇ ನರವೈಜ್ಞಾನಿಕ ಹಾನಿ ಆಗದಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿತು. ಇಂಪ್ಲಾಂಟಬಲ್ ಕಾರ್ಡೊಯೋವರ್ಟರ್ ಡಿಫಿಬ್ರಿಲೇಟರ್ ಅಳವಡಿಕೆಗಾಗಿ ಅವರನ್ನು ಹೃದ್ರೋಗ ವಿಭಾಗಕ್ಕೆ ವರ್ಗಾಯಿಸಲಾಯಿತು.


ಸಿಟಿವಿಎಸ್ ವಿಭಾಗದ ಡಾ.ಶ್ಯಾಮ್ ಕೆ. ಅಶೋಕ್, ಡಾ.ವಿಜಯ್ ಕುಮಾರ್, ಡಾ.ಸಾಯಿ, ಡಾ.ಗಣೇಶ್ ಕಾಮತ್ ಮತ್ತು ಡಾ.ಶುಭಂ ಅವರು ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್'ನ ಪರ್ಫ್ಯೂಷನಿಸ್ಟ್ ಹಲೀಶ್ ಜೊತೆ ನಿರ್ವಹಿಸಿದರು.


ವೈದ್ಯರ ಸಾಧನೆಯನ್ನು ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುಧಾಕರ್ ಕಂಟಿಪುಡಿ ಪ್ರಶಂಸಿಸಿದ್ದಾರೆ.