ಲೋಕಬಂಧು ನ್ಯೂಸ್ | ಉಡುಪಿ, ಆ.18
ತುಳುಕೂಟ ಉಡುಪಿ ನೀಡುವ `ಎಸ್.ಯು. ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ'ಗೆ ಪುತ್ತೂರಿನ ಸಾಹಿತಿ ಸುಲೋಚನಾ ಪಿ.ಕೆ. ಅವರ ದಧೂಟಿಬನ ಕಾದಂಬರಿ ಆಯ್ಕೆಯಾಗಿದೆ. ಪ್ರಶಸ್ತಿ 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿಪತ್ರ ಮತ್ತು ಫಲಕ ಒಳಗೊಂಡಿದೆ ಎಂದು ತುಳುಕೂಟ ಉಡುಪಿ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.
ಸಾಹಿತಿ ಸುಲೋಚನಾ ಪಿ.ಕೆ. ಅವರು ಪುತ್ತೂರು ತಾಲೂಕು ಉಪತಹಶೀಲ್ದಾರರಾಗಿದ್ದಾರೆ. ಅವರ `ಸತ್ಯದರ್ಶನ' ಕೃತಿಗೆ ಜಿ.ಪಿ.ರಾಜರತ್ನಂ ದತ್ತಿ ಪ್ರಶಸ್ತಿ, `ಅಮ್ಮನ ಮಾತ್ ಭಸ್ಮ ಕಟ್ಟಿದ ತಗಡ್ನ ತಾಯತಾತ್' ಕೃತಿಗೆ ಅರೆಭಾಷೆ ಅಕಾಡೆಮಿ ಪ್ರಶಸ್ತಿ ಲಭಿಸಿದೆ. 'ಕೊಡುವ ಮೊದಲು', 'ಸೊನ್ನೆ' ಕವನ ಸಂಕಲನ, 'ಶ್ರೀಸಾಯಿ ಶತನಮನ' ಭಜನಾಮೃತ, 'ಮೂಗಿಯ ಮನದೊಳು' ಕಾದಂಬರಿ, 'ಸಖಿವಚನ' ಕೃತಿಗಳು ಪ್ರಕಟಗೊಂಡಿವೆ.
ತುಳುಕೂಟ ಉಡುಪಿ ಕಳೆದ 31 ವರ್ಷಗಳಿಂದ ತುಳು ಚಳವಳಿಯ ಪ್ರವರ್ತಕರಾಗಿದ್ದ ದಿ.ಎಸ್.ಯು. ಪಣಿಯಾಡಿ ಸ್ಮರಣಾರ್ಥ ಈ ಪ್ರಶಸ್ತಿಯನ್ನು ಮುದ್ರಣಗೊಳ್ಳದ ತುಳು ಕಾದಂಬರಿಕಾರರಿಗೆ ನೀಡುತ್ತಾ ಬಂದಿದೆ. ಪಣಿಯಾಡಿ ಕಾದಂಬರಿ ಸ್ಪರ್ಧೆಯ ತೀರ್ಪುಗಾರರಾಗಿ ಸಾಹಿತಿಗಳಾದ ಡಾ.ವಿ.ಕೆ. ಯಾದವ್, ವಾಸಂತಿ ಅಂಬಲಪಾಡಿ ಮತ್ತು ಪುಷ್ಪ ಪ್ರಸಾದ್ ಸಹಕರಿಸಿದ್ದರು.
ಪ್ರಶಸ್ತಿ ಪ್ರದಾನ ಸಮಾರಂಭ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ತುಳುಕೂಟ ಉಡುಪಿ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಿದಿಯೂರು ಮತ್ತು ಪಣಿಯಾಡಿ ಕಾದಂಬರಿ ಪ್ರಶಸ್ತಿ ಸಂಚಾಲಕ ಪ್ರಕಾಶ ಸುವರ್ಣ ಕಟಪಾಡಿ ತಿಳಿಸಿದ್ದಾರೆ.
