ಲೋಕಬಂಧು ನ್ಯೂಸ್ | ಉಡುಪಿ, ಆ.18
ಪತ್ರಕರ್ತರು ಸದಾ ಕಾಲ ಒತ್ತಡದಿಂದ ಕಾರ್ಯನಿರ್ವಹಿಸುತ್ತಿರುತ್ತಾರೆ. ಆದ್ದರಿಂದ ಅವರಿಗೆ ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಲು ಸಾಧ್ಯವಾಗುತ್ತಿಲ್ಲ. ಆಹಾರ ಪದ್ಧತಿ, ವ್ಯಾಯಮ ಕೂಡಾ ನಿಯಮಿತವಾಗಿರದೆ ಸಾಕಷ್ಟು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಆದ್ದರಿಂದ ಪತ್ರಕರ್ತರು ತಮ್ಮ ಆರೋಗ್ಯದ ಕಡೆಗೆ ನಿಗಾ ವಹಿಸಿ ಆಗಾಗ ತಪಾಸಣೆಗೊಳಪಡುವುದು ಅತೀ ಅಗತ್ಯ ಎಂದು ಲೊಂಬಾರ್ಡ್ ಮೆಮೋರಿಯಲ್ (ಮಿಷನ್) ಆಸ್ಪತ್ರೆ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಹೇಳಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಅಮೃತ್ ಡಯಾಗ್ನಸ್ಟಿಕ್ ಸೆಂಟರ್ ಸಹಯೋಗದೊಂದಿಗೆ ಸಂಘದ ಸದಸ್ಯರಿಗೆ ಅಮೃತ್ ಡಯಾಗ್ನಸ್ಟಿಕ್ ಸೆಂಟರ್‌ನಲ್ಲಿ ಹಮ್ಮಿಕೊಳ್ಳಲಾದ ನಾಲ್ಕು ದಿನಗಳ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ನಾವು ಇಂದು ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ನಿಯಮಿತವಾಗಿ ಆಹಾರ ಸೇವನೆ, ವ್ಯಾಯಾಮಕ್ಕೆ ಆದ್ಯತೆ ನೀಡಬೇಕು. ಅದರಿಂದ ಡಯಾಬಿಟಿಸ್, ಬಿಪಿಯಂಥ ಕಾಯಿಲೆಗಳಿಂದ ದೂರ ಇರಬಹುದು. ಪತ್ರಕರ್ತರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನಕೊಡುವುದರಿಂದ ಇನ್ನಷ್ಟು ಉತ್ಸಾಹದಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದವರು ಹೇಳಿದರು.
ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು, ಪತ್ರಿಕಾ ಭವನ ಸಮಿತಿ ಸಂಚಾಲಕ ಅಂಕಿತ್ ಶೆಟ್ಟಿ, ಜಿಲ್ಲಾ ಸಂಘದ ಕೋಶಾಧಿಕಾರಿ ಹರೀಶ್ ಕುಂದರ್ ಮೊದಲಾದವರಿದ್ದರು.
ಅಮೃತ್ ಡಯಾಗ್ನಸ್ಟಿಕ್ ಸೆಂಟರ್ನ ಮುಖ್ಯಸ್ಥ ಸತೀಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಸ್ವಾಗತಿಸಿ, ಉಚಿತ ತಪಾಸಣೆ ಶಿಬಿರ ಆಗಸ್ಟ್ 21ರ ವರೆಗೆ ನಡೆಯಲಿದೆ. ಸಂಘದ ಸದಸ್ಯರು ತಮ್ಮ ಗುರುತಿನ ಚೀಟಿ ತೋರಿಸಿ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ವಂದಿಸಿದರು. ಕಾಪು ತಾಲೂಕು ಪ್ರಧಾನ ಕಾರ್ಯದರ್ಶಿ ಪುಂಡಲೀಕ ಮರಾಠೆ ನಿರೂಪಿಸಿದರು.
