ಉಚ್ಚಿಲ ದಸರಾ: ವೈಭವದ ಶೋಭಾಯಾತ್ರೆ

ಲೋಕಬಂಧು ನ್ಯೂಸ್ ಪಡುಬಿದ್ರಿ
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದಲ್ಲಿ ಕಳೆದ ಅ.11ರಂದು ಭಾನುವಾರ ಆರಂಭಗೊಂಡ ಐದನೇ ವರ್ಷದ ಉಡುಪಿ ಉಚ್ಚಿಲ ದಸರಾ ಮಹೋತ್ಸವಕ್ಕೆ ವಿಜಯ ದಶಮಿಯಂದು ಬುಧವಾರ ಸಂಭ್ರಮದ ತೆರೆ ಎಳೆಯಲಾಯಿತು.ಶ್ರೀ ಮಹಾಲಕ್ಷ್ಮೀ ಸನ್ನಿಧಿಯಲ್ಲಿ ಶ್ರೀಕ್ಷೇತ್ರದ ತಂತ್ರಿಗಳಾದ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ಪ್ರಧಾನ ಪುರೋಹಿತ ರಾಘವೇಂದ್ರ ಉಪಾಧ್ಯಾಯ ನೇತೃತ್ವದಲ್ಲಿ ಬೆಳಿಗ್ಗೆ ಉದಯಪೂಜೆ, ಸಾಮೂಹಿಕ ಪ್ರಾರ್ಥನೆ ನಡೆದು ಮಹಾಪೂಜೆ ನಡೆಸಲಾಯಿತು.ಸಾಮೂಹಿಕ ಚಂಡಿಕಾ ಯಾಗ ನಡೆದು ಯಾಗ ಪೂರ್ಣಾಹುತಿ ನಡೆಯಿತು.ಪ್ರಸಾದ ವಿತರಣೆ, ಪಲ್ಲಪೂಜೆ ಬಳಿಕ ನಡೆದ ಮಹಾಅನ್ನಸಂತರ್ಪಣೆಯಲ್ಲಿ ಸಹಸ್ರಾರು ಮಂದಿ ಭಾಗವಹಿಸಿ, ಶ್ರೀ ದೇವಿಯ ಅನ್ನಪ್ರಸಾದ ಸ್ವೀಕರಿಸಿದರು.ಭಜನಾ ಸಂಕೀರ್ತನೆ ನಡೆಯಿತು. ಶ್ರೀ ಶಾರದಾಮಾತೆ ಮತ್ತು ನವದುರ್ಗೆಯರಿಗೆ ಮಹಾಮಂಗಳಾರತಿ ನಡೆದು ಅಪರಾಹ್ನ 2.30ರಿಂದ ವಿಸರ್ಜನಾ ಪೂಜೆ ನಡೆಯಿತು.ಅಪರಾಹ್ನ 3 ಗಂಟೆಗೆ ವಿಸರ್ಜನಾ ಮೆರವಣಿಗೆ ಆರಂಭವಾಯಿತು. ಡ್ರೋನ್ ಮೂಲಕ ಶ್ರೀ ಶಾರದಾ ಮಾತೆಗೆ ಪುಷ್ಪವೃಷ್ಟಿ ನಡೆಸಲಾಯಿತು.ಉಚ್ಚಿಲ ದಸರಾ ರೂವಾರಿ ನಾಡೋಜ ಡಾ.ಜಿ. ಶಂಕರ್ ಅವರು ಶಾರದಾಮಾತೆಗೆ ಆರತಿ ಬೆಳಗುವ ಮೂಲಕ ವೈಭವೋಪೇತ ಮೆರವಣಿಗೆಗೆ ಚಾಲನೆ ನೀಡಿದರು.ಆನೆಯ ಪ್ರತಿಕೃತಿಯಲ್ಲಿ ಉಚ್ಚಿಲ ಮಹಾಲಕ್ಷ್ಮಿಯ ಉತ್ಸವಮೂರ್ತಿಯನ್ನು ಇರಿಸಲಾಯಿತು. ಪ್ರತ್ಯೇಕ ವಾಹನಗಳಲ್ಲಿ ಶ್ರೀ ಶಾರದೆ ಹಾಗೂ ನವದುರ್ಗೆಯರ ಮೂರ್ತಿಗಳನ್ನು ಇರಿಸಲಾಗಿತ್ತು.ನೂರಾರು ಟ್ಯಾಬ್ಲೊಗಳು, ಚೆಂಡೆ ವಾದ್ಯವೈವಿಧ್ಯ, ಭಜನೆ ತಂಡಗಳು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮೆರವಣಿಗೆಯಲ್ಲಿ ಸಾಗಿಬಂದರು.ಉಚ್ಚಿಲ ದೇವಳದಿಂದ ಆರಂಭಗೊಂಡ ಮೆರವಣಿಗೆ ಕಾಪು ದೀಪಸ್ತಂಭದ ವರೆಗೆ ಸಾಗಿತು. ದೀಪಸ್ತಂಭ ಬಳಿ ಕಾಶಿ ಪಂಡಿತರಿಂದ ಗಂಗಾರತಿ, ಸುಮಂಗಳೆಯರಿಂದ ಮಹಾಮಂಗಳಾರತಿ, ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಿತು. ಸಮುದ್ರದಲ್ಲಿ ಮೂರ್ತಿಗಳ ಜಲಸ್ತಂಭನ ನಡೆಸಲಾಯಿತು. ದಾರಿಯುದ್ದಕ್ಕೂ ಭಕ್ತಾದಿಗಳು ಜಾತಿ ಮತ ಭೇದ ಬದಿಗಿಟ್ಟು ತಳಿರು ತೋರಣಗಳಿಂದ ಸಿಂಗರಿಸಿದ್ದರು.


ಈ ಸಂದರ್ಭದಲ್ಲಿ ಉಡುಪಿ ಉಚ್ಚಿಲ ದಸರಾ ರೂವಾರಿ ನಾಡೋಜ ಡಾ.ಜಿ.ಶಂಕರ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸುವರ್ಣ, ಉಡುಪಿ- ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮೋಹನ್ ಬೇಂಗ್ರೆ, ದಿನೇಶ್ ಎರ್ಮಾಳ್, ಮನೋಜ್ ಕಾಂಚನ್, ಸತೀಶ್ ಕುಂದರ್ ಮಲ್ಪೆ, ವಾಸುದೇವ ಸಾಲ್ಯಾನ್, ಗುಂಡು ಬಿ. ಅಮೀನ್, ರತ್ನಾಕರ ಸಾಲ್ಯಾನ್ ಮಲ್ಪೆ, ವಿಶ್ವಾಸ್ ಅಮೀನ್, ಸಂಧ್ಯಾದೀಪ ಸುನಿಲ್, ಕವಿತಾ ಶರತ್, ದೇವಳದ ಪ್ರಬಂಧಕ ಸತೀಶ ಅಮೀನ್ ಪಡುಕೆರೆ ಮೊದಲಾದವರಿದ್ದರು.

ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ ಮತ್ತು ಯಶಪಾಲ್ ಸುವರ್ಣ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ‌ಲಾಲಾಜಿ ಮೆಂಡನ್, ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಮೊದಲಾದವರಿದ್ದರು.


ರಾತ್ರಿ ಶ್ರೀ ಮಹಾಲಕ್ಷ್ಮೀ ಕಲ್ಪೋಕ್ತಪೂಜೆ, ಮಹಾಮಂಗಳಾರತಿ ನಡೆಸಲಾಯಿತು.