ಲೋಕಬಂಧು ನ್ಯೂಸ್ ಹಿರಿಯಡಕ
ವೃದ್ಧೆಯೊಬ್ಬರನ್ನು ಭಾವನಾತ್ಮಕವಾಗಿ ನಂಬಿಸಿ ಮನೆಯಲ್ಲಿದ್ದ ಚಿನ್ನದ ಸರ ಕಳವು ಮಾಡಿದ ಪ್ರಕರಣವನ್ನು ಹಿರಿಯಡ್ಕ ಪೊಲೀಸರು ಭೇದಿಸಿದ್ದು, ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಉಮೇಶ್ ಶೆಟ್ಟಿ (45) ಎಂಬಾತನನ್ನು ಬಂಧಿಸಿದ್ದಾರೆ.ಆರೋಪಿಯಿಂದ 1.85 ಲಕ್ಷ ರೂ. ಮೌಲ್ಯದ 15 ಗ್ರಾಂ ಚಿನ್ನ ಹಾಗೂ ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ನ್ನು ವಶಪಡಿಸಿಕೊಳ್ಳಲಾಗಿದೆ.
ಇಲ್ಲಿನ ಪುತ್ತೂರು ಗ್ರಾಮದ ಸುಬ್ರಹ್ಮಣ್ಯ ನಗರದ ನಿವಾಸಿ ಉಮೇಶ್ ಶೆಟ್ಟಿ ಬಂಧಿತ ಆರೋಪಿಯಾಗಿದ್ದು,
ಕುಕ್ಕೆಹಳ್ಳಿ ಗ್ರಾಮದ ಬಡಪಾಲು ನಿವಾಸಿ ಬಾಬಿ ಹಾಂಡ್ತಿ (75) ಮನೆಯಲ್ಲಿ ಸೆ.13ರಂದು ಕಳವು ನಡೆದಿತ್ತು. ಬೆಳಿಗ್ಗೆ ಮನೆಗೆ ಬಂದಿದ್ದ ವ್ಯಕ್ತಿಯೊಬ್ಬ, ಬಾಬಿ ಹಾಂಡ್ತಿ ಅವರ ಮಗ ದಿನೇಶ್ ಮೃತಪಟ್ಟಿರುವ ವಿಷಯ ತನಗೆ ತಿಳಿದಿದೆ ಎಂದು ಹೇಳಿ, ಮರುದಿನ ವಿಮಾ ಅಧಿಕಾರಿಗಳು ಮನೆಗೆ ಬಂದು ಹೆಚ್ಚಿನ ಹಣ ಬಿಡುಗಡೆ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದ.
ಮಧ್ಯಾಹ್ನ ಬಾಬಿ ಹಾಂಡ್ತಿ ಅವರು ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಮನೆಯ ಮೇಜಿನ ಮೇಲಿಟ್ಟಿದ್ದರು. ಮಧ್ಯಾಹ್ನ 1.30ರ ಸುಮಾರಿಗೆ ಮತ್ತೆ ಮನೆಗೆ ಬಂದಿದ್ದ ವ್ಯಕ್ತಿ, ಅವರೊಂದಿಗೆ ಮಾತನಾಡಿ ಸಮಾಧಾನಪಡಿಸಿದ್ದ. ಬಳಿಕ ವೃದ್ಧೆ ತೋಟಕ್ಕೆ ತೆರಳಿ ದನವನ್ನು ಕೊಟ್ಟಿಗೆಗೆ ಕಟ್ಟಿ ವಾಪಸಾದಾಗ ವ್ಯಕ್ತಿ ನಾಪತ್ತೆಯಾಗಿದ್ದ. ಮೇಜಿನ ಮೇಲಿಟ್ಟಿದ್ದ ಚಿನ್ನದ ಸರವೂ ಕಾಣೆಯಾಗಿತ್ತು.
ಆ ಕುರಿತು ಸೆ.14ರಂದು ಬಾಬಿ ಹಾಂಡ್ತಿ ಅವರ ಪುತ್ರ ಶಂಕರ ಕುಲಾಲ್ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಸುಮಾರು 50ರಿಂದ 60 ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ತಾಂತ್ರಿಕ ಮಾಹಿತಿ ಆಧಾರದಲ್ಲಿ ಆರೋಪಿಯನ್ನು ಪತ್ತೆಹಚ್ಚಿದ್ದಾರೆ.
ಅ.23ರಂದು ಉಡುಪಿಯ ಸುಬ್ರಹ್ಮಣ್ಯ ನಗರದ ಆತನ ಮನೆಯ ಬಳಿ ಆರೋಪಿಯನ್ನು ವಶಕ್ಕೆ ಪಡೆದು ಚಿನ್ನ ಹಾಗೂ ಮೋಟಾರ್ ಸೈಕಲ್ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಹಾಗೂ ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ ನೇತೃತ್ವದಲ್ಲಿ ಪಿಎಸ್ಐ ಪುನೀತ್ ಕುಮಾರ್ ಬಿ.ಇ. (ಕಾ.ಸು.) ಮತ್ತು ಸಿಬ್ಬಂದಿಗಳಾದ ಪ್ರವೀಣ್ ರೈ, ಪ್ರವೀಣ್ ಶೆಟ್ಟಿ, ರಮೇಶ್ ಹೆರ್ಗ, ಕೃಷ್ಣ ಪೂಜಾರಿ ಹಾಗೂ ಮಹಾಂತೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.