ಸರ್ಕಾರದ ಸಾಧನೆಯೇ ರಾಜಕೀಯ ಪಕ್ಷಗಳ ಸ್ಪರ್ಧೆಯ ಮಾನದಂಡವಾಗಲಿ

ಲೋಕಬಂಧು ನ್ಯೂಸ್ | ಉಡುಪಿ
ರಾಜಕೀಯ ಪಕ್ಷಗಳ ನಡುವೆ ಅಭಿವೃದ್ಧಿ ಕಾರ್ಯಗಳ ಆಧಾರದಲ್ಲಿ ಸ್ಪರ್ಧೆ ನಡೆದಾಗ ಮಾತ್ರ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯ. ಸರ್ಕಾರದ ಸಾಧನೆಗಳೇ ರಾಜಕೀಯ ಸ್ಪರ್ಧೆಯ ಮಾನದಂಡವಾಗಬೇಕು. ಇಂಥ ಜವಾಬ್ದಾರಿಯುತ ಸ್ಪರ್ಧಾತ್ಮಕ ರಾಜಕೀಯ ವ್ಯವಸ್ಥೆಯಿಂದ ಆಡಳಿತದಲ್ಲಿ ಸುಧಾರಣೆ ತರಲು ಸಾಧ್ಯ ಎಂದು ಮಾಜಿ ಐಪಿಎಸ್ ಅಧಿಕಾರಿ ಹಾಗೂ 'ವಿ ದ ಲೀಡರ್ಸ್‌’ ಸಂಸ್ಥಾಪಕ ಕೆ.ಅಣ್ಣಾಮಲೈ  ಅಭಿಪ್ರಾಯ ವ್ಯಕ್ತಪಡಿಸಿದರು.
ಉಡುಪಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್‌ (ಉಮ್ರಾ) ಆಶ್ರಯದಲ್ಲಿ ಅಜ್ಜರಕಾಡು ಪುರಭವನದಲ್ಲಿ ಶನಿವಾರ ನಡೆದ ಅಖಿಲ ಭಾರತ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್‌ನ ರಾಜ್ಯ ಮಟ್ಟದ ರಿಟೇಲರ್ಸ್ ಸಮಾವೇಶ ಹಾಗೂ ಸಂಘಟನೆಯ 12ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ನಾಳಿನ ಉದ್ಯಮಿಗಳ ನಿರ್ಮಾಣ, ಇಂದಿನ ಸ್ಥಳೀಯ ವ್ಯಾಪಾರಗಳ ಸಂರಕ್ಷಣೆ ವಿಷಯದ ಕುರಿತು ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.


ಪೋಸ್ಟರ್ ಸಂಸ್ಕೃತಿಗೆ ಸೀಮಿತವಾಗಬಾರದು
ರಾಜಕೀಯ ಕೇವಲ ಪೋಸ್ಟರ್ ಸಂಸ್ಕೃತಿಗೆ ಸೀಮಿತವಾಗಬಾರದು. ಮುಖ್ಯಮಂತ್ರಿ ಅಥವಾ ಮಾಜಿ ಮುಖ್ಯಮಂತ್ರಿ ಆಗಮನದ ಪೋಸ್ಟರ್‌ಗಳನ್ನು ಅಳವಡಿಸುವ ಬದಲು, ಸರ್ಕಾರ ಉಡುಪಿಗೆ  ಹಾಗೂ ಕಲ್ಸಂಕಕ್ಕೆ ನೀಡಿದ ಕೊಡುಗೆಗಳೇನು ಎಂಬುದನ್ನು ಜನರಿಗೆ ತಿಳಿಸುವ ಪೋಸ್ಟರ್‌ಗಳು ಕಾಣಿಸಿಕೊಳ್ಳುವಂತಾಗಬೇಕು ಎಂದವರು ಆಶಿಸಿದರು.


ಆರ್ಥಿಕತೆಗಾಗಿ ಮೇಕ್ ಫಾರ್ ಇಂಡಿಯಾ
ದೇಶದ ಆರ್ಥಿಕತೆಯನ್ನು ಉತ್ತೇಜಿಸಿ ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಪ್ರಧಾನಿ ಮೋದಿ ಘೋಷಿಸಿದ ಮೇಕ್ ಇನ್ ಇಂಡಿಯಾ ಮಾದರಿಯಲ್ಲೇ ಮುಂದಿನ ದಿನಗಳಲ್ಲಿ ಮೇಕ್ ಫಾರ್ ಇಂಡಿಯಾ ಯೋಜನೆ ಘೋಷಿಸುವ ಅವಶ್ಯಕತೆಯಿದೆ ಎಂದು ಅಣ್ಣಾಮಲೈ ಪ್ರತಿಪಾದಿಸಿದರು.


ಪ್ರಜಾಪ್ರಭುತ್ವದಲ್ಲಿ ಎಲ್ಲರನ್ನೂ ಸಂತೃಪ್ತಿ ಪಡಿಸಲು ಆಗುವುದಿಲ್ಲ. ನಮಗೆ ಮುಖಂಡರು ಇಷ್ಟವಾದರೂ ಸಮಸ್ಯೆಗಳು ಎದುರಾದರೆ ಪಕ್ಷ ಬಿಟ್ಟು ಹೊರ ಬಂದು ನಿರ್ಧಾರ ಕೈಗೊಳ್ಳಬೇಕು. ದೇಶದಲ್ಲಿ ಕಾರ್ಪೋರೇಟ್ ಕಂಪನಿಗಳಿಗೆ ವಿನಾಯಿತಿ ನೀಡುವಂತೆ ರಿಟೇಲ್ ಶಾಪ್‌ಗಳಿಗೂ ವಿನಾಯಿತಿ ನೀಡಬೇಕು ಎಂದವರು ಸಲಹೆ ನೀಡಿದರು.


ಕರ್ನಾಟಕದಲ್ಲಿ ರಾಜಕೀಯ ಹೆಚ್ಚು ಜವಾಬ್ದಾರಿಯುತವಾಗಬೇಕು. ಉಚಿತ ಕೊಡುಗೆಗಳನ್ನು ಘೋಷಿಸಿ ಮತ ಪಡೆಯುವ ರಾಜಕಾರಣಕ್ಕೆ ಸೀಮಿತವಾಗದೆ, ರಾಜ್ಯಕ್ಕೆ ಉತ್ತಮ ಆಡಳಿತ ನೀಡುವತ್ತ ರಾಜಕೀಯ ಪಕ್ಷಗಳು ಗಮನಹರಿಸಬೇಕು. ಕರ್ನಾಟಕ ಇನ್ನಷ್ಟು ಉತ್ತಮ ಆಡಳಿತವನ್ನು ನಿರೀಕ್ಷಿಸುವ ಅರ್ಹತೆಯನ್ನು ಹೊಂದಿದೆ.


ಬೆಂಗಳೂರು ಮಾತ್ರ ಅಭಿವೃದ್ಧಿಯಾದರೆ ಸಾಲದು. ರಾಜ್ಯದ ಒಟ್ಟೂ ಜಿಡಿಪಿಗೆ ಬೆಂಗಳೂರಿನ ಕೊಡುಗೆ ಶೇ.65ರಷ್ಟಿದೆ ಎಂಬ ಹಿನ್ನೆಲೆಯಲ್ಲಿ ವಿಜಯಪುರ, ಕಲಬುರ್ಗಿ, ಗದಗ, ಉಡುಪಿ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳೂ ಸಮಾನವಾಗಿ ಅಭಿವೃದ್ಧಿಯಾಗಬೇಕು. ಕರ್ನಾಟಕ ಕೇವಲ ಬೆಂಗಳೂರು ಅವಲಂಬಿತ ರಾಜ್ಯವಾಗದೆ, ಎಲ್ಲ ಪ್ರದೇಶಗಳಲ್ಲೂ ಅಭಿವೃದ್ಧಿ ಸಾಧಿಸುವಂತಾಗಬೇಕು ಎಂದು ಅಣ್ಣಾಮಲೈ ಹೇಳಿದರು.


ಎಐಎಂಆರ್‌ಎ ಸಂಸ್ಥಾಪಕ ಅಧ್ಯಕ್ಷ ಕೈಲಾಶ್ ಲಖ್ಯಾನಿ, ರಾಜ್ಯಾಧ್ಯಕ್ಷ ರವಿ ಕುಮಾರ್, ರಾಜ್ಯ ಕಾರ್ಯದರ್ಶಿ ಸುಹಾಸ್ ಕಿಣಿ, ಯುಎಂಆರ್‌ಎ ಸ್ಥಾಪಕಾಧ್ಯಕ್ಷ ವಿವೇಕ್ ಜಿ. ಸುವರ್ಣ ಉಪಸ್ಥಿತರಿದ್ದರು.