ಲೋಕಬಂಧು ನ್ಯೂಸ್ | ಪಡುಬಿದ್ರಿ
ಅದಾನಿ ಪವರ್ ಲಿಮಿಟೆಡ್- ಉಡುಪಿ ಟಿಪಿಪಿ ಸಂಸ್ಥೆ ತನ್ನ ಸಿಎಸ್ಆರ್ ಅಂಗವಾದ ಅದಾನಿ ಫೌಂಡೇಶನ್ ಮೂಲಕ ಫಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮುದಾಯ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 20 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಅವರಲಮಟ್ಟು ಗ್ರಾಮದಲ್ಲಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ ಶನಿವಾರ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಿಶೋರ್ ಆಳ್ವ ಅವರು, ಕಳೆದ ಒಂದು ದಶಕದಿಂದ ಸ್ಥಾವರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವಾರು ಸಾಮಾಜಿಕ ಬೆಳವಣಿಗೆ ಕಾರ್ಯಕ್ರಮ ಅನುಷ್ಠಾನಗೊಳಿಸಿದ್ದು ಅವುಗಳಲ್ಲಿ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ, ಗ್ರಾಮೀಣ ಕ್ರೀಡೆ, ಸಾಮಾಜಿಕ ಅರಣ್ಯೀಕರಣ ಕ್ಷೇತ್ರಗಳು ಒಳಗೊಂಡಿವೆ. ವಿಶೇಷವಾಗಿ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಸ್ಥಾವರದ ಸುತ್ತಮುತ್ತಲಿನ 7 ಗ್ರಾಮ ಪಂಚಾಯತ್'ಗಳಿಗೆ ವಿಶೇಷ ಅನುದಾನ ಮೀಸಲಿಟ್ಟಿದ್ದು, ಗ್ರಾಮ ಪಂಚಾಯತ್ ನೀಡುವ ವಾರ್ಷಿಕ ಕ್ರಿಯಾಯೋಜನೆ ಪ್ರಕಾರ ಅದಾನಿ ಫೌಂಡೇಶನ್ ಅಭಿವೃದ್ಧಿ ಕಾಮಗಾರಿ ಅನುಷ್ಠಾನಗೊಳಿಸುತ್ತಿದೆ ಎಂದರು.
ಫಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮುದಾಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ಅದಾನಿ ಪವರ್ ಲಿಮಿಟೆಡ್ ಒಟ್ಟು 3 ಕೋಟಿ ಸಿಎಸ್ಆರ್ ಅನುದಾನ ಘೋಷಿಸಿದ್ದು, ಈವರೆಗೆ ಸುಮಾರು ರೂ.1.81 ಕೋಟಿ ಮೊತ್ತದ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಅವರಲಮಟ್ಟು ರಸ್ತೆಯಿಂದ ಗ್ರಾಮಸ್ಥರು ಹಾಗೂ ಕೃಷಿಕರಿಗೆ ಅನುಕೂಲವಾಗಲಿದೆ ಎಂದರು.
ಫಲಿಮಾರು ಗ್ರಾ.ಪಂ. ಕಾರ್ಯದರ್ಶಿ ಸುಧಾಕರ್, ಅದಾನಿ ಫೌಂಡೇಶನ್ ಸಿಬಂದಿ ಅನುದೀಪ್ ಹಾಗೂ ಧೀರಜ್ ಉಪಸ್ಥಿತರಿದ್ದರು.