ಲೋಕಬಂಧು ನ್ಯೂಸ್ | ಉಡುಪಿ
ನಗರದ ಹಳೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ 29 ವರ್ಷದ ಮಹಿಳೆಯೊಬ್ಬರು ತನ್ನ 3 ವರ್ಷದ ಮಗುವಿನೊಂದಿಗೆ ನಾಪತ್ತೆಯಾಗಿರುವ ಘಟನೆ ವರದಿಯಾಗಿದ್ದು, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾಪತ್ತೆಯಾದವರನ್ನು ಕಾವ್ಯ (29) ಹಾಗೂ ಅವರ ಮೂರು ವರ್ಷದ ಪುತ್ರ ಶಿವಾಂಶ್ ಎಂದು ಗುರುತಿಸಲಾಗಿದೆ.
ಪೊಲೀಸ್ ಪ್ರಕಟಣೆ ಪ್ರಕಾರ, ಮೂಲತಃ ನಾಸಿಕ್ನಿಂದ ಬಂದಿದ್ದ ಕಾವ್ಯ ಮತ್ತು ಮಗುವನ್ನು ಮೆಣಸೆಯಲ್ಲಿರುವ ಆಕೆಯ ಪತಿ ಯತೀಶ್ವರ ಅವರ ಮನೆಗೆ ಬಿಡಲು ಸಂಬಂಧಿಕರು ಅಕ್ಟೋಬರ್ 23ರಂದು ಬೆಳಿಗ್ಗೆ ಉಡುಪಿಗೆ ಕರೆತಂದಿದ್ದರು. ಬೆಳಿಗ್ಗೆ ಸುಮಾರು 8.30ಕ್ಕೆ ಉಡುಪಿಗೆ ತಲುಪಿದ ಬಳಿಕ ಆಟೋ ರಿಕ್ಷಾದಲ್ಲಿ ಹಳೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಂದು ಲಗೇಜ್ ಇಳಿಸಿ ನಿಂತಿದ್ದರು.
ಆ ವೇಳೆ ಕಾವ್ಯ ಅವರು, ತನಗೆ ತಿಂಡಿ ಅಥವಾ ಚಹಾ ಬೇಡವೆಂದೂ, ಜೊತೆಯಲ್ಲಿದ್ದವರು ತಿಂಡಿ ಸೇವಿಸಿ ಬರುವಂತೆಯೂ ತಿಳಿಸಿದ್ದರು ಎನ್ನಲಾಗಿದೆ.
ಅದರಂತೆ ಸಂಬಂಧಿಕರು ಹೋಟೆಲ್ಗೆ ತೆರಳಿ ಬೆಳಿಗ್ಗೆ ಸುಮಾರು 9.15ಕ್ಕೆ ವಾಪಸ್ ಬಂದಾಗ ಕಾವ್ಯ ಮತ್ತು ಮಗು ಸ್ಥಳದಲ್ಲಿ ಇರಲಿಲ್ಲ. ಸುತ್ತಮುತ್ತ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆ ಮತ್ತು ಮಗುವಿನ ಪತ್ತೆಗಾಗಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾವ್ಯ ಅವರು ಸುಮಾರು 4 ಅಡಿ 10 ಇಂಚು ಎತ್ತರವಿದ್ದು, ಎಣ್ಣೆಕಪ್ಪು ಮೈಬಣ್ಣ, ಕಪ್ಪು ಕೂದಲು ಹಾಗೂ ಸಾಧಾರಣ ಶರೀರ ಹೊಂದಿದ್ದಾರೆ. ನಾಪತ್ತೆಯಾಗುವ ವೇಳೆ ಹಳದಿ ಬಣ್ಣದ ಹೂಗಳಿರುವ ಟಾಪ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಕನ್ನಡ, ಹಿಂದಿ, ತುಳು ಮತ್ತು ಮರಾಠಿ ಭಾಷೆ ಮಾತನಾಡುತ್ತಾರೆ.
ಕಾವ್ಯ ಮತ್ತು ಮಗು ಶಿವಾಂಶ್ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆ 0820-2520444 ಅಥವಾ ಉಡುಪಿ ಕಂಟ್ರೋಲ್ ರೂಮ್ 0820-2526444 ಅಥವಾ ಪೊಲೀಸ್ ನಿರೀಕ್ಷಕರು 9480805408 ಅಥವಾ ಪೊಲೀಸ್ ಉಪನಿರೀಕ್ಷಕರು 9080805445 ಅವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.
