ಉಡುಪಿ ಉಚ್ಚಿಲ ದಸರಾ: ಮಹಾಲಕ್ಷ್ಮೀ ಕಲ್ಪೋಕ್ತಪೂಜೆ, ಚಂಡಿಕಾ ಹೋಮ ಪೂರ್ಣಾಹುತಿ

ಲೋಕಬಂಧು ನ್ಯೂಸ್ ಪಡುಬಿದ್ರಿ
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದಲ್ಲಿ ನಡೆಯುತ್ತಿರುವ ಪಂಚಮ ವರ್ಷದ ಉಡುಪಿ ಉಚ್ಚಿಲ ದಸರಾ ಮಹೋತ್ಸವದ ಕೊನೆಯ ದಿನವಾದ ಬುಧವಾರ ಶ್ರೀ ಮಹಾಲಕ್ಷ್ಮೀ ಸನ್ನಿಧಿಯಲ್ಲಿ ಶ್ರೀ ಮಹಾಲಕ್ಷ್ಮೀ ಕಲ್ಪೋಕ್ತಪೂಜೆ ನಡೆಸಲಾಯಿತು.ಶ್ರೀಕ್ಷೇತ್ರದ ತಂತ್ರಿಗಳಾದ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ಪ್ರಧಾನ ಪುರೋಹಿತ ರಾಘವೇಂದ್ರ ಉಪಾಧ್ಯಾಯ ನೇತೃತ್ವದಲ್ಲಿ ಬೆಳಿಗ್ಗೆ ಉದಯಪೂಜೆ, ಸಾಮೂಹಿಕ ಪ್ರಾರ್ಥನೆ ನಡೆದು ಮಹಾಪೂಜೆ ನಡೆಸಲಾಯಿತು. ಸಾಮೂಹಿಕ ಚಂಡಿಕಾ ಯಾಗ ನಡೆದು ಯಾಗ ಪೂರ್ಣಾಹುತಿ ನಡೆಯಿತು.ಪ್ರಸಾದ ವಿತರಣೆ ಬಳಿಕ ನಡೆದ ಮಹಾಅನ್ನಸಂತರ್ಪಣೆಯಲ್ಲಿ ಸಹಸ್ರಾರು ಮಂದಿ ಭಾಗವಹಿಸಿ, ಶ್ರೀ ದೇವಿಯ ಅನ್ನಪ್ರಸಾದ ಸ್ವೀಕರಿಸಿದರು.
ಭಜನಾ ಸಂಕೀರ್ತನೆ ನಡೆಯಿತು.. ಶ್ರೀ ಶಾರದಾಮಾತೆ ಮತ್ತು ನವದುರ್ಗೆಯರಿಗೆ ಮಹಾಮಂಗಳಾರತಿ ನಡೆದು ಅಪರಾಹ್ನ 2.30ರಿಂದ ವಿಸರ್ಜನಾ ಪೂಜೆ ನಡೆಯಿತು. ರಾತ್ರಿ ಶ್ರೀ ಮಹಾಲಕ್ಷ್ಮೀ ಕಲ್ಪೋಕ್ತಪೂಜೆ, ಮಹಾಮಂಗಳಾರತಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಉಚ್ಚಿಲ ದಸರಾ ರೂವಾರಿ ನಾಡೋಜ ಡಾ.ಜಿ.ಶಂಕರ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸುವರ್ಣ, ಉಡುಪಿ- ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮೋಹನ್ ಬೇಂಗ್ರೆ, ದಿನೇಶ್ ಎರ್ಮಾಳ್, ಮನೋಜ್ ಕಾಂಚನ್, ಸತೀಶ್ ಕುಂದರ್ ಮಲ್ಪೆ, ವಾಸುದೇವ ಸಾಲ್ಯಾನ್, ಗುಂಡು ಬಿ. ಅಮೀನ್, ರತ್ನಾಕರ ಸಾಲ್ಯಾನ್ ಮಲ್ಪೆ, ವಿಶ್ವಾಸ್ ಅಮೀನ್, ಸಂಧ್ಯಾದೀಪ ಸುನಿಲ್, ಕವಿತಾ ಶರತ್, ದೇವಳದ ಪ್ರಬಂಧಕ ಸತೀಶ ಅಮೀನ್ ಪಡುಕೆರೆ ಮೊದಲಾದವರಿದ್ದರು