ಲೋಕಬಂಧು ನ್ಯೂಸ್ ಉಡುಪಿ
ಚುನಾವಣಾ ಆಯೋಗಕ್ಕೆ ಪೌರತ್ವ ಗುರುತಿಸುವ ಹಕ್ಕು ಇಲ್ಲದಿದ್ದರೂ ಎಸ್ಐಆರ್ ಮೂಲಕ ಆ ಕೆಲಸ ಮಾಡುತ್ತಿದೆ. ಅದರ ವಿರುದ್ಧ ನಡೆಯುವ ಪ್ರತಿಭಟನೆಗಳನ್ನು ಅಪಪ್ರಚಾರಗಳ ಮೂಲಕ ಹತ್ತಿಕ್ಕಲಾಗುತ್ತಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆಕ್ರೋಶ ವ್ಯಕ್ತಪಡಿಸಿದರು.ವೋಟ್ ಚೋರಿ- ದೇಶ್ ಬಚಾವೋ ಅಭಿಯಾನದ ಅಂಗವಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಕೇಂದ್ರದ ಬಿಜೆಪಿ ಸರ್ಕಾರ ಚುನಾವಣಾ ಆಯೋಗವನ್ನು ಬಳಸಿಕೊಂಡು ಪ್ರಜಾಪ್ರಭುತ್ವವನ್ನು ಅಡಿಮೇಲುಗೊಳಿಸುವ ಮತ್ತು ಜನರ ಮತ ಹಕ್ಕು ಕಸಿಯುವ ಪ್ರಯತ್ನ ನಡೆಸುತ್ತಿದೆ ಎಂದವರು ಆರೋಪಿಸಿದರು.
ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಮಾತನಾಡಿ, ಮುಂದಿನ ದಿನಗಳಲ್ಲಿ ಝೆನ್ ಜಿಗಳ ಮತ ಹಕ್ಕನ್ನು ಕಸಿಯುವ ಸಾಧ್ಯತೆಯೂ ಇದೆ. ಉದ್ಯೋಗ ಕೊಡುತ್ತೇವೆ ಎಂದು ಭರವಸೆ ನೀಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ, ಇಂದು ಯುವಜನರ ಉದ್ಯೋಗ ಕಸಿಯುವ ಕೆಲಸ ಮಾಡುತ್ತಿದೆ. ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ನೀಡುತ್ತಿದೆ ಎಂದರು.
ಚಿಂತಕ ಡಾ.ಗಣನಾಥ ಎಕ್ಕಾರ್, ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಬಲಡ್ಕ ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಮುಖಂಡರಾದ ಎಂ.ಎ. ಗಫೂರ್, ಸದಾಶಿವ ಉಳ್ಳಾಲ್, ಅಶೋಕ್ ಕುಮಾರ್ ಕೊಡವೂರು, ಗೋಪಾಲ ಪೂಜಾರಿ, ದಿನಕರ ಹೇರೂರು, ಪ್ರಶಾಂತ್ ಜತ್ತನ್ನ, ಪ್ರಸಾದ್ ರಾಜ್ ಕಾಂಚನ್, ರಾಜು ಪೂಜಾರಿ, ಮುನಿಯಾಲು ಉದಯಕುಮಾರ್ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ವೆರೋನಿಕಾ ಕರ್ನೇಲಿಯೊ, ರಮೇಶ್ ಕಾಂಚನ್, ಭಾಸ್ಕರ ರಾವ್ ಕಿದಿಯೂರು, ದಿನೇಶ್ ಕುಲಾಲ್, ಗೋಪಿನಾಥ್ ಭಟ್, ಸದಾನಂದ ಶೆಟ್ಟಿ ಉಪಸ್ಥಿತರಿದ್ದರು.
ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ಸ್ವಾಗತಿಸಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ವಂದಿಸಿದರು.