ಮಣಿಪಾಲ, ನ.15 (ಲೋಕಬಂಧು ವಾರ್ತೆ): ಮಧುಮೇಹ ಜಾಗೃತಿ, ತಡೆ ಹಾಗೂ ನಿರ್ವಹಣೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ನವೆಂಬರ್ 14ನ್ನು ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಎಂಡೋಕ್ರಿನೊಲೊಜಿ (ಅಂತಃಸ್ರಾವಶಾಸ್ತ್ರ) ವಿಭಾಗದ ವತಿಯಿಂದ ವಿಶ್ವ ಮಧುಮೇಹ ದಿನ ಅಂಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನ. 14ರಂದು ರಾತ್ರಿ ಮಲ್ಪೆ ಬೀಚ್ ನಲ್ಲಿರುವ ಗಾಂಧಿ ಪ್ರತಿಮೆಯನ್ನು ನೀಲಿ ಬಣ್ಣದ ದೀಪಗಳಿಂದ ಬೆಳಗಲಾಯಿತು.
ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಲು ನೀಲಿ ಬಣ್ಣವನ್ನು ನೀಲಿ ವೃತ್ತದ ಚಿಹ್ನೆಯಿಂದ ತೆಗೆದುಕೊಳ್ಳಲಾಗಿದೆ. ಈ ಚಿಹ್ನೆಯನ್ನು ಇಂಟರ್ ನ್ಯಾಷನಲ್ ಡಯಾಬಿಟಿಸ್ ಫೆಡರೇಶನ್ (ಐಡಿಎಫ್) ಮಧುಮೇಹಕ್ಕೆ ಪರಿಹಾರ ಕಂಡುಹಿಡಿಯಲು ಅಗತ್ಯವಾದ ಏಕತೆಯನ್ನು ಪ್ರತಿನಿಧಿಸುತ್ತದೆ.
ಎಂಡೋಕ್ರೈನಾಲಜಿ ವಿಭಾಗದ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥೆ ಡಾ. ಸಹನಾ ಶೆಟ್ಟಿ ಮಾತನಾಡಿ, ಭಾರತದಲ್ಲಿ ಪ್ರತೀ ಹನ್ನೊಂದು ಮಂದಿಯಲ್ಲಿ ಒಬ್ಬರು ಟೈಪ್ 2 ಡಯಾಬಿಟಿಸ್ ನಿಂದ ಬಳಲುತ್ತಿದ್ದು, ಈ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಮಧುಮೇಹ ಹೃದ್ರೋಗ, ಮೂತ್ರಪಿಂಡದ ಸಮಸ್ಯೆ, ವಯಸ್ಕರಲ್ಲಿ ಕಣ್ಣಿನ ಸಮಸ್ಯೆ, ನರಗಳ ಸಮಸ್ಯೆ ಮತ್ತು ಪಾದದ ಅಂಗಚ್ಛೇದನಗಳಿಗೆ ಪ್ರಮುಖ ಕಾರಣವಾಗಿದೆ.
ಟೈಪ್ 2 ಡಯಾಬಿಟಿಸ್ ನ್ನು ಆರೋಗ್ಯಕರ ಆಹಾರ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಮತ್ತು ಚಿಕ್ಕ ವಯಸ್ಸಿನಿಂದಲೇ ದೈಹಿಕ ಚಟುವಟಿಕೆ ಮತ್ತು ನಿತ್ಯ ವ್ಯಾಯಾಮದ ಮೂಲಕ ತಡೆಗಟ್ಟಬಹುದು. ವೈದ್ಯರು ಸೂಚಿಸಿದ ಸೂಕ್ತ ಔಷಧ ತೆಗೆದುಕೊಳ್ಳುವುದು ಮತ್ತು ನಿಯಮಿತ ತಪಾಸಣೆ ಅತ್ಯಗತ್ಯ ಎಂದರು.
ಕೆಎಂಸಿ ಮಣಿಪಾಲದ ಡೀನ್ ಡಾ. ಪದ್ಮರಾಜ್ ಹೆಗ್ಡೆ, ಈ ವರ್ಷದ ಘೋಷವಾಕ್ಯ ನಾಳೆಯ ಆರೋಗ್ಯಕ್ಕಾಗಿ ಮಧುಮೇಹದ ಜಾಗೃತಿ ಆಗಿದ್ದು ಮಧುಮೇಹ ಇರುವವರು ಮುಖ್ಯವಾಗಿ ಹಣ್ಣು, ತರಕಾರಿ, ಧಾನ್ಯಗಳು, ಕಾಳುಗಳು, ರಾಗಿ, ಬೀಜಗಳು, ತೆಳ್ಳಗಿನ ಮಾಂಸ ಮತ್ತು ಕಡಿಮೆ ಕೊಬ್ಬಿನ ಆಹಾರ ಒಳಗೊಂಡಂತೆ ಆರೋಗ್ಯಕರ ಪೋಷಕಾಂಶಯುಕ್ತ ಆಹಾರ ಸೇವಿಸುವ ಮೂಲಕ ಅದರಿಂದಾಗುವ ತೊಂದರೆಗಳನ್ನು ತಡೆಯಬಹುದು ಮತ್ತು ಗ್ಲುಕೋಸ್ ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂದರು.
ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮಾತನಾಡಿ, ಮಧುಮೇಹ ದಿನದ ಅಂಗವಾಗಿ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಬಸ್ ಚಾಲಕರು ಹಾಗೂ ನಿರ್ವಹಕರು ಮತ್ತು ಇತರರಿಗೆ ಉಚಿತ ಮಧುಮೇಹ ತಪಾಸಣೆ ನ.16ರಂದು ಮಣಿಪಾಲದ ಟೈಗರ್ ಸರ್ಕಲ್ ನಲ್ಲಿರುವ ಟ್ಯಾಕ್ಸಿ ನಿಲ್ದಾಣದ ಬಳಿ ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆ ತನಕ ಆಯೋಜಿಸಲಾಗಿದೆ ಎಂದರು.
