ಲೋಕಬಂಧು ನ್ಯೂಸ್ | ಉಡುಪಿ, ಮೇ 12
ಆಚಾರ್ಯ ಮಧ್ವರ ಭಕ್ತಿಗೆ ಶ್ರೀಕೃಷ್ಣ ಒಲಿದು ಕಾಣಿಸಿಕೊಂಡು ಅವರ ಕೈಸೇರಿದ ಮಲ್ಪೆಯ ಕಡಲತೀರದ ಶ್ರೀಆನಂದ ಶರಧಿ ನಿವೇಶನದಲ್ಲಿ ಮಲ್ಪೆಯ ಶ್ರೀಕೃಷ್ಣ ಪರಿಸರ ಪ್ರತಿಷ್ಠಾನ ಆಶ್ರಯದಲ್ಲಿ ಅದಮಾರು ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ನೇತೃತ್ವದಲ್ಲಿ ಕೃಷ್ಣಾಪುರ, ಅದಮಾರು, ಪಲಿಮಾರು, ಪೇಜಾವರ ಮತ್ತು ಸೋದೆ ಮಠಾಧೀಶರ ಸಂಕಲ್ಪದಂತೆ ಮೇ 15ರಿಂದ 31ರ ವರೆಗೆ ಅಧಿಕ ಜ್ಯೇಷ್ಠ ಭಕ್ತಿಸುಧಾ ಭಜನಾ ಸ್ಪರ್ಧೆ ಹಾಗೂ ಕೃಷಿಮೇಳ ಮತ್ತು ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ ಎಂದು ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಹಾಗೂ ನಗರಸಭಾ ಮಾಜಿ ಸದಸ್ಯ ವಿಜಯ ಕೊಡವೂರು ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿದ ಅವರು, ಮಲ್ಪೆ ಕಡಲತೀರ ಕೇವಲ ಮೋಜುಮಸ್ತಿಗಾಗಿ ಮಾತ್ರವಲ್ಲ, ಅಲ್ಲಿ ಆಧ್ಯಾತ್ಮಿಕತೆಗೂ ಸ್ಥಾನ ಕಲ್ಪಿಸಬೇಕು. ಆಚಾರ್ಯ ಮಧ್ವರಿಗೆ ಕೃಷ್ಣಮೂರ್ತಿ ಲಭಿಸಿದ ತಾಣವನ್ನು ಶ್ರದ್ಧಾಭಕ್ತಿಯ ನೆಲೆಯಾಗಿಸಬೇಕು ಎಂಬ ಆಶಯದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಮೇ 15ರಿಂದ ಮೂರು ದಿಗಳ ಕಾಲ ಕೃಷಿಮೇಳ ನಡೆಯಲಿದ್ದು ಹಲಸು- ಮಾವು ಮೇಳವೂ ನಡೆಯಲಿದೆ. ಅಂದು ಅಪರಾಹ್ನ 4 ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರು, ಸೋದೆ ಶ್ರೀ ವಿಶ್ವವಲ್ಲಭತೀರ್ಥರು ಮತ್ತು ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪಾಲ್ಗೊಳ್ಳಲಿದ್ದು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಪದ್ಮಪ್ರಶಸ್ತಿ ಪುರಸ್ಕೃತ ಕೃಷಿಕ ಸತ್ಯನಾರಾಯಣ ಬೆಳಾಲು, ರವಿಪ್ರಕಾಶ್ ಮೊದಲಾದವರು ಭಾಗವಹಿಸುವರು. ನೇಕಾರಿಕೆ, ಕುಂಬಾರಿಕೆ, ಕೃಷಿ ಇತ್ಯಾದಿಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.
ಮೇ 18ರಂದು ಅಪರಾಹ್ನ 3.30ರಿಂದ ವಡಭಾಂಡೇಶ್ವರದ ಬಲರಾಮ ದೇವಳದಿಂದ ಆನಂದ ಶರಧಿ ನಿವೇಶನದ ವರೆಗೆ ಗಣ್ಯರೊಂದಿಗೆ ಶೋಭಾಯಾತ್ರೆ ನಡೆಯಲಿದ್ದು, ಬಳಿಕ ಭಜನಾ ಸ್ಪರ್ಧೆ ನಡೆಯಲಿದೆ. ಮೇ 18ರಿಂದ 29ರ ವರೆಗೆ ಪ್ರತಿದಿನ ಸಂಜೆ 5.30ರಿಂದ 7.30ರ ವರೆಗೆ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗಾಗಿ ಪ್ರತ್ಯೇಕ ಸ್ಪರ್ಧೆ ಆಯೋಜಿಸಲಾಗಿದ್ದು ವಿಜೇತ ತಂಡಗಳಿಗೆ ಬಹುಮಾನ ನಿಗದಿಪಡಿಸಲಾಗಿದೆ. ಸುಮಾರು 60 ತಂಡಗಳನ್ನು ನಿರೀಕ್ಷಿಸಲಾಗಿದೆ.
ಮೇ 24ರಂದು ಬೆಳಿಗ್ಗೆ 7ರಿಂದ ಗ್ರಾಮೀಣ ಕ್ರೀಡಾ ಸ್ಪರ್ಧೆ ನಡೆಯಲಿದ್ದು ಅಪೂರ್ವ ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಚೆನ್ನೆಮಣೆ, ಕುಟ್ಟಿದೊಣ್ಣೆ ಇತ್ಯಾದಿ ಕ್ರೀಡೆಗಳನ್ನು ಆಯೋಜಿಸಲಾಗುವುದು.
ಮೇ 31ರಂದು ಮಾತೃವಂದನ ಕಾರ್ಯಕ್ರಮ ನಡೆಯಲಿದ್ದು ಚಿಂತಕಿ ಬಿ.ವಿ. ಆರತಿ ದಿಕ್ಸೂಚಿ ಭಾಷಣ ಮಾಡುವರು. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆಯೂ ನಡೆಯಲಿದೆ ಎಂದು ವಿಜಯ ಕೊಡವೂರು ವಿವರಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂಘಟನಾ ಕಾರ್ಯದರ್ಶಿ ಗೋವಿಂದರಾಜ್, ಮಹಿಳಾ ಸಂಚಾಲಕಿಯರಾದ ತಾರಾ ಆಚಾರ್ಯ, ಸುಮಿತ್ರಾ ಕೆರೆಮಠ ಮತ್ತು ಕಮಲಾವತಿ, ಸಮಿತಿಯ ಪ್ರಮುಖರಾದ ರಾಧಾಕೃಷ್ಣ ಮೆಂಡನ್, ಪ್ರೀತಂ ಭಟ್, ಮಂಜು ಕೊಳ, ಸಂತೋಷ್ ಉದ್ಯಾವರ, ಚಂದ್ರಕಾಂತ ಕೆ.ಎನ್. ಮೊದಲಾದವರಿದ್ದರು.

