ಲೋಕಬಂಧು ನ್ಯೂಸ್ ಉಡುಪಿ, ಮೇ 13
ಯುವಜನತೆಗೆ ಉದ್ಯೋಗ, ಇಂಟರ್ನ್‌ಶಿಪ್ ಮತ್ತು ವೃತ್ತಿ ಮಾರ್ಗದರ್ಶನ ಒದಗಿಸುವ ಆಶಯದಿಂದ ಮೇ 18ರಂದು ಕೊಡವೂರಿನಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದೆ ಎಂದು ಉದ್ಯೋಗ ಮೇಳದ ಅಧ್ಯಕ್ಷೆ ಡಾ.ದಿವ್ಯಾರಾಣಿ ಬುಧವಾರ ಸುದ್ದಿ ಗೋಷ್ಟಿಯಲ್ಲಿ ತಿಳಿಸಿದರು.ಸಾರಲತಾ ಐಟಿ ಸೊಲ್ಯೂಷನ್ಸ್ ಮತ್ತು ಸರಳಾ ಬಾಬುರಾವ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಮ್ಯಾನೇಜ್‌ಮೆಂಟ್, ಎಂಜಿನಿಯರಿಂಗ್, ಉತ್ಪಾದನಾ ವಲಯ, ಆರೋಗ್ಯ ಸೇವೆ, ಹೋಟೆಲ್, ಬ್ಯಾಂಕಿಂಗ್ ಮತ್ತು ಹಣಕಾಸು, ಮಾರಾಟ ಮತ್ತು ಮಾರುಕಟ್ಟೆ, ತಾಂತ್ರಿಕ ಸೇವೆಗಳು, ಲಾಜಿಸ್ಟಿಕ್ಸ್ ಹಾಗೂ ಸೇವಾ ವಲಯ, ಕೌಶಲ್ಯ ಇತ್ಯಾದಿ ವಿವಿಧ ಕ್ಷೇತ್ರಗಳ 60ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ.
ಟೊಯೋಟಾ-ಕಿರ್ಲೋಸ್ಕರ್, ಇನ್‌ವೆಂಜರ್ ಟೆಕ್ನಾಲಜೀಸ್, ಮೆಜೆಸ್ಟಿಕ್ ಗ್ಲೋಬಲ್ ಲಾಜಿಸ್ಟಿಕ್ಸ್, ಅನಾನ್ ಗ್ರೂಪ್ ವಿನ್‌ಮ್ಯಾನ್ ಸಾಫ್ಟ್‌ವೇರ್, ಅಮೆಝಾನ್, ಬ್ರೇವರಾ ಟೆಕ್ನಾಲಜೀಸ್, ವಿಆರ್‌ಎನ್ ಇನ್ಫೋಟೆಕ್, ಡಾ.ರೆಡ್ಡಿಸ್ ಫೌಂಡೇಶನ್, ಸ್ವಿಗ್ಗಿ, ಎಚ್‌ಡಿಎಫ್‌ಸಿ ಬ್ಯಾಂಕ್, ಮಣಿಪಾಲ್ ಪೇಮೆಂಟ್ ಆ್ಯಂಡ್ ಐಡೆಂಟಿಟಿ ಮತ್ತು ಅಕೋಲೇಡ್ ಸೇರಿದಂತೆ ಅನೇಕ ಪ್ರಮುಖ ಕಂಪನಿಗಳು ಭಾಗವಹಿಸಲಿವೆ.
ಪದವಿ, ಡಿಪ್ಲೊಮಾ, ಎಂಜಿನಿಯರಿಂಗ್, ಐಟಿಐ, ಪಿಯುಸಿ, ಎಸ್‌ಎಸ್‌ಎಲ್‌ಸಿ ಹಾಗೂ ವಿವಿಧ ಕೌಶಲ್ಯಾಧರಿತ ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ 6 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶ ಲಭ್ಯವಾಗಲಿವೆ. ಹೊಸ ಅಭ್ಯರ್ಥಿಗಳು ಹಾಗೂ ಅನುಭವ ಹೊಂದಿದವರಿಗೆ ಸಮಾನ ಅವಕಾಶಗಳು ದೊರೆಯಲಿದೆ.
ಅಭ್ಯರ್ಥಿಗಳಿಗೆ ನೇರ ಸಂದರ್ಶನಗಳಲ್ಲಿ ಭಾಗವಹಿಸುವುದು, ಕಂಪನಿ ಪ್ರತಿನಿಧಿಗಳೊಂದಿಗೆ ಸಂವಾದ ಹಾಗೂ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಉಡುಪಿಯಲ್ಲಿ ಉದ್ಯೋಗ ಅವಕಾಶಗಳನ್ನು ಅರಿಯುವ ಅವಕಾಶ ಲಭಿಸಲಿದೆ.
ಈ ಬಾರಿ ವಿಶೇಷವಾಗಿ ಸ್ಟಾರ್ಟ್ಅಪ್ ಹಾಗೂ ಸ್ವಯಂ ಉದ್ಯೋಗ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಮೊದಲ ಬಾರಿಗೆ ಉಡುಪಿಯಲ್ಲಿ ಪರಿಚಯಿಸಲಾಗುತ್ತಿದೆ. ಮಣಿಪಾಲ್ ಯುನಿವರ್ಸಲ್ ಬಿಸಿನೆಸ್ ಇಂಕ್ಯೂಬೇಟರ್ಸ್, ಯೆನಪೋಯ ಟೆಕ್ನಾಲಜಿ ಇಂಕ್ಯೂಬೇಟರ್ ಮತ್ತು ರುಡೋಟಿ ಸಂಸ್ಥೆಗಳು ಉದ್ಯಮ ಆರಂಭಿಸಲು ಬಯಸುವ ಯುವಜನತೆಗೆ ಮಾರ್ಗದರ್ಶನ ಹಾಗೂ ಮೆಂಟರ್‌ಶಿಪ್ ನೀಡಲಿವೆ.
ಒಂದೇ ವೇದಿಕೆಯಲ್ಲಿ ತಕ್ಷಣದ ಸಂದರ್ಶನ, ತಕ್ಷಣದ ಆಯ್ಕೆ ಇಂಟರ್ನ್‌ಶಿಪ್ ಅವಕಾಶ ಹಾಗೂ ಉದ್ಯಮಿತ್ಯ ಮಾರ್ಗದರ್ಶನ ಒದಗಿಸುವ ಸಮಗ್ರ ವೃತ್ತಿ ವೇದಿಕೆಯಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಯುವಜನತೆ ಈ ಸುವರ್ಣಾವಕಾಶ ಸದುಪಯೋಗಪಡಿಸಿಕೊಳ್ಳುವಂತೆ ಡಾ.ದಿವ್ಯಾರಾಣಿ ಕರೆ ನೀಡಿದರು.
ಅಭ್ಯರ್ಥಿಗಳು https://forms.gle/Zvx4BmwCdYSch1ZF6 ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಅಥವಾ ಮೇ 18ರಂದು ಬೆಳಗ್ಗೆ 9 ಗಂಟೆಯಿಂದ ಅಪರಾಹ್ನ 4ರ ವರೆಗೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಸಮೀಪದ ವಿಪ್ರಶ್ರೀ ಸಭಾಭವನಕ್ಕೆ ನೇರವಾಗಿ ಭೇಟಿ ನೀಡಬಹುದು. ಅಭ್ಯರ್ಥಿಗಳು ಕನಿಷ್ಠ 5ರಿಂದ 7 ಪ್ರತಿಗಳ ಸಿ.ವಿ ಹಾಗೂ ಐಡಿ ಕಾರ್ಡ್ ತರಬೇಕು ಎಂದವರು ತಿಳಿಸಿದರು.
ಉದ್ಯೋಗ ಮೇಳದ ಕಾರ್ಯದರ್ಶಿ ರೇವತಿ ನಾಡಿಗೀರ್ ಮಾತನಾಡಿ, ಮೇ 18ರಂದು ನಡೆಯುವ ಉದ್ಘಾಟನ ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ. ಖಾದರ್, ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್, ಕಾರ್ಯಕ್ರಮ ಪ್ರಾಯೋಜಕ ಪ್ರಸಾದ್ ರಾಜ್ ಕಾಂಚನ್, ಎಚ್.ಪಿ.ಆರ್ ಗ್ರೂಪ್‌ನ ಅಧ್ಯಕ್ಷ ಹರಿಪ್ರಸಾದ್ ರೈ, ನಗರಸಭೆ ಆಯುಕ್ತ ಮಹಾಂತೇಶ್ ಹಂಗರಗಿ, ಶ್ರೀನಿವಾಸ್ ಯುನಿವರ್ಸಿಟಿ ನಿರ್ದೇಶಕಿ ಡಾ.ದಿವ್ಯಾರಾಣಿ ಪ್ರದೀಪ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ಸಾತ್ವಿಕ್ ಎಸ್. ಆಚಾರ್ಯ, ಧ್ರುವರಾಜ್ ಮೊದಲಾದವರಿದ್ದರು.