ರುದ್ರದೇವರ ಆರಾಧನೆಯಿಂದ ಕಷ್ಟ ದೂರ

ಲೋಕಬಂಧು ನ್ಯೂಸ್ ಉಡುಪಿ, ಮೇ 17
ರುದ್ರದೇವರು ತನ್ನನ್ನು ನಂಬಿದ ಭಕ್ತರ ದುಃಖವನ್ನು ಪರಿಹರಿಸುತ್ತಾರೆ. ರುದ್ರದೇವರಲ್ಲಿ ಅತ್ಯಂತ ಭಕ್ತಿಯಿಂದ ಪ್ರಾರ್ಥಿಸುವ ಭಕ್ತರ ಎಲ್ಲ ಕಷ್ಟಕಾರ್ಪಣ್ಯವನ್ನು ದೂರ ಮಾಡುತ್ತಾರೆ ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹೇಳಿದರು.ಕೊಡವೂರು ಶ್ರೀ‌ ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್‌ರಾಜ್‌ ಕಾಂಚನ್‌ ಅವರ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಮಹಾರುದ್ರ ಯಾಗದ ಎರಡನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶನಿವಾರ ಆಶೀರ್ವಚನ ನೀಡಿದರು.


ಉಡುಪಿ ಪರ್ಯಾಯ ಮಹೋತ್ಸವದ ಮಾದರಿಯಲ್ಲೇ ಕೊಡವೂರಿನಲ್ಲಿ ಮಹಾರುದ್ರ ಯಾಗ ವೈಭವದಿಂದ ನಡೆಯುತ್ತಿರುವುದು ಬಹಳ ಸಂತೋಷದ ವಿಚಾರ. ಕಾರ್ಯಕ್ರಮದ ಮುಖ್ಯ ರೂವಾರಿ ಪ್ರಸಾದ್ ರಾಜ್ ಕಾಂಚನ್ ಎಂದು ಹೇಳಲು‌ ಸಂತೋಷವಾಗುತ್ತದೆ ಎಂದರು.


ರಾಜಕೀಯದಲ್ಲಿ ಸ್ಥಾನ ಲಭಿಸಲಿ
ಪ್ರಸಾದ್ ರಾಜ್ ಕಾಂಚನ್ ಅವರಿಗೆ  ಒಳ್ಳೆಯ ಸ್ಥಾನ ಸಿಗಲಿ. ಉಡುಪಿಗೆ ಉತ್ತಮ ನಾಯಕನ ಅಗತ್ಯವಿದೆ. ಸಾತ್ವಿಕ, ಉಪಕಾರಿ ವ್ಯಕ್ತಿ ಉಡುಪಿಯ ನಾಯಕನಾಗಿ ಬರಬೇಕು. ಉಡುಪಿ ಚೆನ್ನಾಗಿ ಅಭಿವೃದ್ಧಿಯಾಗಬೇಕು. ಜನರಿಗೆ ಒಳ್ಳೆಯ ಸೌಕರ್ಯಗಳು ಲಭಿಸಬೇಕು. ಕಾಂಚನ್ ಅವರು ಬಂಗಾರದಂಥ ಮನುಷ್ಯ. ಅವರ ಮನಸ್ಸು ಕೂಡ ಬಂಗಾರ. ಅದೇ ರೀತಿಯಲ್ಲಿ ಸಾಮಾಜಿಕ, ಧಾರ್ಮಿಕ ಕೆಲಸಗಳನ್ನು ಮಾಡಿಕೊಂಡು ಸಮಾಜದಲ್ಲಿ ವಿಶಿಷ್ಟವಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿಯೂ ಉತ್ತಮ ಸ್ಥಾನ ಪಡೆಯುವ ಅನುಗ್ರಹವನ್ನು ಶ್ರೀ ಶಂಕರನಾರಾಯಣ ದೇವರು ಅವರಿಗೆ  ಮಾಡಲಿ ಎಂದು‌ ಹಾರೈಸಿದರು.


ಮಹಾರುದ್ರ ಯಾಗ ಸಮಿತಿ ಕಾರ್ಯಾಧ್ಯಕ್ಷ, ಸೇವಾಕರ್ತ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ಧಾರ್ಮಿಕತೆಯ ಜೊತೆ ಸಾಮಾಜಿಕ, ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯದ ಸಂಕಲ್ಪದೊಂದಿಗೆ ಈ ಮಹಾರುದ್ರ ಯಾಗವನ್ನು ಹಮ್ಮಿಕೊಂಡಿದ್ದೇವೆ.


ಕರಾವಳಿ ಜಿಲ್ಲೆ ಮೀನುಗಾರಿಕೆ ಅವಲಂಬಿತವಾಗಿದೆ. ಕಳೆದ ಹತ್ತು ವರ್ಷದಿಂದ ಮೀನುಗಾರಿಕೆ ಕುಂಠಿತವಾಗಿ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಶಿಯ ಪುರೋಹಿತರನ್ನು ಕರೆಸಿ ಅರಬ್ಬೀಸಮುದ್ರಕ್ಕೆ ಗಂಗಾರತಿ ಮಾಡುವ ದೊಡ್ಡ ಸಂಕಲ್ಪ ಮಾಡಿದ್ದೇವೆ ಎಂದರು.


ಉಡುಪಿ ಜಿಲ್ಲೆ ಎಲ್ಲಾ ಕ್ಷೇತ್ರಗಳಲ್ಲಿ ಮುಂದಿದೆ. ಅದನ್ನು ಉಳಿಸಿಕೊಂಡು ಹೋಗುವ ಕೆಲಸ ಆಗಬೇಕು. ಇಂಥ ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು‌ ಮಾಡಲು ಉದ್ಯಮಿಗಳು ಮುಂದಾಗಬೇಕು‌ ಎಂದರು.


ಮತ್ಸ್ಯೋದ್ಯಮಿ ಆನಂದ ಪಿ. ಸುವರ್ಣ, ಕಾಂಗ್ರೆಸ್ ನಾಯಕಿ ವೆರೋನಿಕಾ ಕರ್ನೇಲಿಯೊ, ತೋಟದಮನೆ ದಿವಾಕರ ಶೆಟ್ಟಿ, ವಿಠಲ ಪೂಜಾರಿ, ಮಾಧವ ಬನ್ನಂಜೆ, ರಾಮಪ್ಪ ಸಾಲಿಯಾನ್, ಹರೀಶ್ ಶೆಟ್ಟಿ, ಸಂಚಾಲಕ ತಾರನಾಥ ಪೂಜಾರಿ, ಸಂತೋಷ್ ನಾಯ್ಕ್, ಕುಶಲ ಸಾಲಿಯಾನ್, ಕೃಷ್ಣಪ್ಪ ಗುರಿಕಾರ್, ಗೋಪಾಲ್ ಸಿ. ಬಂಗೇರ ಉಪಸ್ಥಿತರಿದ್ದರು.


ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರು.