ಕೊಡವೂರು ಮಹಾರುದ್ರಯಾಗ: ವೈಭವದ ಹೊರೆಕಾಣಿಕೆ ಮೆರವಣಿಗೆ

ಲೋಕಬಂಧು ನ್ಯೂಸ್ | ಉಡುಪಿ, ಮೇ 14
ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಉದ್ಯಮಿ ಹಾಗೂ ಕಾಂಗ್ರೆಸ್ ನಾಯಕ ಪ್ರಸಾದ್ ರಾಜ್ ಕಾಂಚನ್ ಅವರ ನೇತೃತ್ವದಲ್ಲಿ ಮೇ 19ರ ವರೆಗೆ ನಡೆಯುವ ಮಹಾರುದ್ರ ಯಾಗದ ಪೂರ್ವಭಾವಿಯಾಗಿ ಗುರುವಾರ ವೈಭವಮಯ ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ಮಲ್ಪೆಯ ಶ್ರೀ ಅಯ್ಯಪ್ಪ ಮಂದಿರದಿಂದ ಪ್ರಾರಂಭವಾದ ಮೆರವಣಿಗೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನಕ್ಕೆ ಭಕ್ತಿಭಾವದಿಂದ ಸಾಗಿತು.


ಬೆಂಗಳೂರು ಆನಂದ ಸಿದ್ಧಿಪೀಠ ಹಾಗೂ ಲಕ್ಷ್ಮೀ ಭೂವರಾಹ ಸಾಲಿಗ್ರಾಮ ಕ್ಷೇತ್ರ ಸಂಸ್ಥಾಪಕ ಮಹರ್ಷಿ ಡಾ. ಆನಂದ ಗುರೂಜಿ ಅವರು ಅಯ್ಯಪ್ಪಸ್ವಾಮಿಗೆ ಆರತಿ ಬೆಳಗಿ, ಬಳಿಕ ಕೇಸರಿ ಬಾವುಟ ಹಾರಿಸುವ  ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.


ಮಹಾರುದ್ರಯಾಗ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್ ರಾಜ್ ಕಾಂಚನ್, ಸಂಚಾಲಕರಾದ ಕೃಷ್ಣಮೂರ್ತಿ ಆಚಾರ್ಯ, ತಾರನಾಥ ಪೂಜಾರಿ, ಕೊಡವೂರು ದೇವಳ ಆಡಳಿತ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ, ಉಚ್ಚಿಲ ಮೊಗವೀರ ಮಹಾಜನ ಸಂಘ ಅಧ್ಯಕ್ಷ  ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ, ಕೊಡವೂರು ದೇವಳ‌ ಅಭಿವೃದ್ಧಿ ಸಮಿತಿ‌ ಕಾರ್ಯದರ್ಶಿ ಜನಾರ್ದನ ಕೊಡವೂರು, ಮೆರವಣಿಗೆ ಸಂಚಾಲಕ ಪಾಂಡುರಂಗ ಮಲ್ಪೆ,  ಉದ್ಯಮಿ ಹರಿಯಪ್ಪ ಕೋಟ್ಯಾನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಸಂಚಾಲಕರಾದ ನಂದಕಿಶೋರ್ ಕೆಮ್ಮಣ್ಣು ರಮೇಶ್ ತಿಂಗಳಾಯ, ವಿಜಯ ಕೊಡವೂರು, ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ ಮೊದಲಾದವರಿದ್ದರು.


ಮೆರವಣಿಗೆಯಲ್ಲಿ ಕೊಂಬು, ಕಹಳೆ, ವಿವಿಧ ವಾದ್ಯಗೋಷ್ಠಿ, ಕೀಲುಕುದುರೆ, ಕರಗ ನೃತ್ಯ, ಚೆಂಡೆ, ವಯೋಲಿನ್, ನವದುರ್ಗೆಯರ ವೇಷಭೂಷಣ, ಮಹಿಳೆಯರ ಮರಕಾಲಿನ ನಡಿಗೆ, ಕಲಶ ಹೊತ್ತ ಮಹಿಳೆಯರು, ಕುಣಿತ ಭಜನೆ ಹಾಗೂ ವೈವಿಧ್ಯಮಯ ಸ್ತಬ್ಧಚಿತ್ರಗಳು ಭಾಗವಹಿಸಿ, ಮೆರವಣಿಗೆಗೆ ಇನ್ನಷ್ಟು ವೈಭವ ತುಂಬಿದವು.


ನೂರಕ್ಕೂ ಅಧಿಕ ವಾಹನಗಳಲ್ಲಿ ತೆಂಗಿನಕಾಯಿ, ಹಲಸಿನಕಾಯಿ, ಬೆಲ್ಲ, ದವಸ ಧಾನ್ಯಗಳು, ಅಕ್ಕಿ, ಕಲ್ಲಂಗಡಿ ಹಾಗೂ ವಿವಿಧ ಸಾಮಗ್ರಿಗಳು ದೇವಸ್ಥಾನಕ್ಕೆ ಬಂದು ತಲುಪಿದವು.